ಗದಗ: ಕೇಂದ್ರ ಸರ್ಕಾರ ಈ ಬಾರಿ ಮಂಡಿಸಿರುವ ಬಜೆಟ್ ಕರ್ನಾಟಕಕ್ಕೆ ತುಂಬಾ ನಿರಾಸೆಯನ್ನು ತಂದಿದೆ. ಆದರೆ ಈ ಬಗ್ಗೆ ಒಬ್ಬರಾದರೂ ಎದ್ದು ನಿಂತು ಪ್ರಶ್ನಿಸಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗದಗದಲ್ಲಿ ಇಂದು (ಫೆಬ್ರವರಿ.3) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಬಜೆಟ್ ಬಿಹಾರ ಚುನಾವಣೆಯ ಘೋಷಣಾ ಪತ್ರವಾಗಿದೆ. ಈ ಬಜೆಟ್ ದಕ್ಷಿಣ ಭಾರತದವರಿಗೆ ಅನ್ಯಾಯ ಮಾಡುವಂತಹ ಬಜೆಟ್ ಆಗಿದೆ. ಫೆಡರಲ್ ವ್ಯವಸ್ಥೆಯೊಳಗೆ ನಮ್ಮ ವಿಶ್ವಾಸ ಕಮ್ಮರುವ ರೀತಿಯಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದೆ ಎಂದರು.
ನಾವು ರಾಜ್ಯದಿಂದ ಕೇಂದ್ರಕ್ಕೆ ಎಷ್ಟು ತೆರಿಗೆಯನ್ನು ವಿಧಿಸುತ್ತೇವೆ ಎಂಬುದು ತಿಳಿದಿದೆ. ಈ ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ನೀಡಿರುವ ಪಾಲು ಎಷ್ಟು? ಈ ವಿಚಾರಕ್ಕೆ ಸಂಬಂಧಿಸಿದಂತೆಯೇ ಈ ಮೊದಲು ನಾವು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಚರ್ಚಿಸಿದ್ದರು ಸಹ ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ ಬಜೆಟ್ ನಮ್ಮ ರಾಜ್ಯಕ್ಕೆ ನಿರಾಸೆಯನ್ನು ತಂದಿರುವ ಕರಾಳ ಬಜೆಟ್ ಆಗಿದೆ ಎಂದು ಹೇಳಿದರು.