Mysore
15
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಿಎಂಗೆ ಪತ್ರ ಬರೆದ ರಾಜ್ಯಪಾಲ ಗೆಹ್ಲೋಟ್‌

ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಪ್ರಕರಣದಲ್ಲಿ ಹಕ್ಕುಚ್ಯುತಿ ಉಲ್ಲಂಘನೆ ಮಾಡಿರುವ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ರಾಜ್ಯಪಾಲ ಥಾವರ್‌ ಚಂದ್ ಗೆಲ್ಹೋಟ್ ಮುಖ್ಯಮಂತ್ರಿ‌ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದಾರೆ.

ಈ ಪ್ರಕರಣವು ಒಬ್ಬ ಜನಪ್ರತಿನಿಧಿಗೆ ಸಂಬಂಧಿಸಿದ ವಿಷಯವಾಗಿದೆ. ಮುಖ್ಯಮಂತ್ರಿಗಳ ಮಧ್ಯಪ್ರವೇಶ ಅಗತ್ಯವಾಗಿದ್ದು, ಹಕ್ಕುಚ್ಯುತಿ ಉಲ್ಲಂಘನೆ ಮಾಡಿರುವ ಪೊಲೀಸರ ವಿರುದ್ಧ ಕಾನೂನು ಕ್ರಮದ ಜೊತೆಗೆ ಶಿಸ್ತು ಕ್ರಮದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ರಾಜಭವನಕ್ಕೆ ಬಂದಿದ್ದ ಸಿ.ಟಿ.ರವಿ ನೇತೃತ್ವದ ನಿಯೋಗವು ನನಗೆ ಲಿಖಿತ ದೂರು ಸಲ್ಲಿಸಿದ್ದು ಜನಪ್ರತಿನಿಧಿಯಾಗಿರುವ ನನ್ನನ್ನು ಅತ್ಯಂತ ಅಗೌರವ ಮತ್ತು ಅಮಾನವೀಯವಾಗಿ ಪೊಲೀಸರು ನಡೆಸಿಕೊಂಡಿದ್ದಾರೆ. ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರು ನೀಡಿದ್ದಾರೆ. ನಾನು ದೂರಿನ ಪ್ರತಿಯನ್ನು ತಮಗೆ ಕಳುಹಿಸಿಕೊಡುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ನನ್ನನ್ನು ಬಂಧಿಸಿದ ನಂತರ ಪೊಲೀಸರು ಒಂದು ರಾತ್ರಿ ಅಪಾಯಕಾರಿ ಪ್ರದೇಶದಲ್ಲಿ ತಿರುಗಾಡಿಸಿದರು. ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂಬ ಸಣ್ಣ ಸುಳಿವನ್ನೂ ಸಹ ನೀಡಲಿಲ್ಲ. ಪ್ರಭಾವಿ ಸಚಿವರ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ನನ್ನನ್ನು ದೈಹಿಕ ಹಾಗೂ ಮಾನಸಿಕವಾಗಿಯೂ ಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೀಗಾಗಿ ಪ್ರಕರಣವು ಗಂಭೀರ ಸ್ವರೂಪವಾಗಿರುವುದರಿಂದ ಕ್ರಮ ಜರುಗಿಸಬೇಕೆಂದು ಸೂಚಿಸಿದ್ದಾರೆ. ಉತ್ತರ ವಲಯ ಐಜಿಪಿ ಹಾಗೂ ಪ್ರಸ್ತುತ ಬೆಂಗಳೂರು ಪಶ್ಚಿಮ ವಲಯದ ಪೊಲೀಸ್ ಆಯುಕ್ತ ವಿಕಾಸ್‍ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾಮಾರ್ಟಿನ್, ಬೆಳಗಾವಿ ಎಸ್‍ಪಿ ಭೀಮಾಶಂಕರ್ ಗುಳೇದ, ಇನ್‍ಸ್ಪೆಕ್ಟರ್ ಸೇರಿದಂತೆ ಹಲವರ ವಿರುದ್ಧ ಗಂಭೀರ ಸ್ವರೂಪದ ದೂರನ್ನು ಕೊಟ್ಟಿದ್ದಾರೆ.

ಪ್ರಕರಣವು ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣವು ಮುಗಿದ ಅಧ್ಯಾಯ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆದರೆ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಿಐಡಿ ತನಿಖೆಗೆ ಆದೇಶ ನೀಡಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದ ಕೊನೆಯ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂಬ ಆರೋಪವು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ.

 

Tags:
error: Content is protected !!