Mysore
19
scattered clouds
Light
Dark

ಬೆಳೆ ವಿಮೆಗೆ ಕರ್ನಾಟಕದಲ್ಲಿ ರೈತರಿಂದ ಉತ್ತಮ ಸ್ಪಂದನೆ

ಬೆಂಗಳೂರು: ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ರೈತರನ್ನು ಆರ್ಥಿಕವಾಗಿ ಕೈಹಿಡಿಯುವ ಬೆಳೆ ವಿಮೆ ಯೋಜನೆಗೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅನ್ನದಾತರು ಬೆಳೆ ವಿಮೆಯತ್ತ ಮುಖ ಮಾಡಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಜೂನ್.‌9ರವರೆಗೆ 5,87,741 ರೈತರು 12,29,741 ಹೆಕ್ಟೇರ್‌ಗೆ ವಿಮೆ ಮಾಡಿಸಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 2 ಲಕ್ಷ ರೈತರು ಮಾತ್ರ ವಿಮೆ ಮಾಡಿಸಿದ್ದರು. ಬರಗಾಲ, ಭಾರೀ ಮಳೆಯ ಆತಂಕದಿಂದಾಗಿ ಬೆಳೆ ವಿಮೆ ಮಾಡಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿರುವುದು ಕಂಡುಬಂದಿದೆ.

ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ವಿಮೆ ಮಾಡಿಸಲು ರೈತರು ಮುಂದಾಗಿದ್ದಾರೆ.

36 ವಿಧದ ಆಹಾರ, ಎಣ್ಣೆಕಾಳು, ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಕೃಷಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಎಣ್ಣೆಕಾಳು ಬೆಳೆಗಳಿಗೆ ಶೇ.2ರಷ್ಟು ಮತ್ತು ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ ಶೇ.5ರಷ್ಟು ಪ್ರೀಮಿಯಂ ಅನ್ನು ರೈತರು ಪಾವತಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇನ್ನುಳಿದ ಪ್ರೀಮಿಯಂ ಮೊತ್ತ ಪಾವತಿಸಲಿವೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಬೆಳೆ ಮತ್ತು ಜಿಲ್ಲಾವಾರು ಅಂತಿಮ ದಿನಾಂಕವನ್ನು ಪಡೆಯಬಹುದು.