ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆಯನ್ನು ವಾಪಸ್ ಪಡೆಯಿರಿ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ಮಂಗಳವಾರ ಪತ್ರ ಬರೆದಿರುವ ಅವರು, ನರೇಗಾ ಯೋಜನೆ ಅಡಿ ಇದ್ದ ೧೦೦ ದಿನಗಳ ಕೆಲಸದ ಗ್ಯಾರಂಟಿಯನ್ನು ವಿಬಿ-ಜಿ ರಾಮ್ ಜಿಯಲ್ಲಿ ೧೨೫ ದಿನಕ್ಕೆ ಹೆಚ್ಚಿಸಿದ್ದೀರಿ. ಮೇಲ್ನೋಟಕ್ಕೆ ಉದ್ಯೋಗದ ದಿನಗಳು ಹೆಚ್ಚಾದಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಈ ಕಾಯ್ದೆಯು ಉದ್ಯೋಗ ಖಾತರಿಯನ್ನೇ ಇಲ್ಲವಾಗಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನರೇಗಾವು ಬೇಡಿಕೆ ಆಧಾರಿತ ಯೋಜನೆಯಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವನ್ನು ಅಧರಿಸಿ, ಕೆಲಸದ ದಿನಗಳನ್ನು ಸೃಷ್ಟಿಸಲಾಗುತ್ತಿತ್ತು. ರಾಜ್ಯದ ಯಾವುದೇ ಭಾಗದಲ್ಲಿಯಾದರೂ ಉದ್ಯೋಗ ಸೃಷ್ಟಿಗೆ ಅವಕಾಶವಿತ್ತು. ಆದರೆ ವಿಬಿ-ಜಿ ರಾಮ್ ಜಿಯು ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಅಧಿಸೂಚಿಸಿದ ಪ್ರದೇಶದಲ್ಲಿ ಮಾತ್ರವೇ ವಿಬಿ-ಜಿರಾಮ್ ಜಿ ಅಡಿಯಲ್ಲಿ ಉದ್ಯೋಗ ನೀಡಬೇಕಾಗುತ್ತದೆ. ಅಂದರೆ, ರಾಜ್ಯದ ಎಲ್ಲ ಭಾಗದ ಜನರಿಗೆ ಉದ್ಯೋಗ ಸಿಗುವುದಿಲ್ಲ. ಕೇಂದ್ರವು ಸೂಚಿಸಿದ ಪ್ರದೇಶದಲ್ಲಿ, ಕೇಂದ್ರವು ಸೂಚಿಸಿದ ಸ್ವರೂಪದ ಕೆಲಸಗಳನ್ನಷ್ಟೇ ಮಾಡಬೇಕಾಗುತ್ತದೆ. ನರೇಗಾವು ನೀಡಿದ್ದ ಉದ್ಯೋಗ ಖಾತರಿಯನ್ನು ನೂತನ ಕಾಯ್ದೆಯು ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ವಿವರಿಸಿದ್ದಾರೆ. ನರೇಗಾದ ಅಡಿಯಲ್ಲಿ ಗ್ರಾಮ ಪಂಚಾಯತಿಗಳು ಉದ್ಯೋಗ ಖಾತರಿಯ ಕಾಮಗಾರಿಗಳನ್ನು ನಿರ್ಧರಿಸುತ್ತಿದ್ದವು. ಈಗ ಕೇಂದ್ರ ಸರ್ಕಾರವು ಆ ಅಧಿಕಾರವನ್ನು ಕಸಿದುಕೊಂಡಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ಸಂವಿಧಾನದ ೭೩ನೇ ತಿದ್ದುಪಡಿಯ ಉದ್ದೇಶವನ್ನೇ ವಿಬಿ-ಜಿ ರಾಮ್ ಜಿ ಕಾಯ್ದೆಯು ಬುಡಮೇಲು ಮಾಡುತ್ತದೆ ಎಂದು ಆರೋಪಿಸಿದ್ದಾರೆ.




