ಬೆಂಗಳೂರು: ಮಹಾತ್ಮ ಗಾಂಧೀಜಿ ಅವರನ್ನು ವಿರೋಧಿಗಳು ಗುಂಡಿಟ್ಟು ಕೊಂದಿರಬಹುದು. ಆದರೆ ಅವರ ಆದರ್ಶ ಮೌಲ್ಯಗಳನ್ನು ನಾಶಮಾಡಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಅಸಮಾನತೆ, ಜಾತಿ ತಾರತಮ್ಯ, ಬಂಡವಾಳಶಾಹಿತ್ವ ಇರುತ್ತದೆಯೋ ಅಲ್ಲಿಯವರೆಗೂ ಗಾಂಧಿ ವಿಚಾರಗಳು ಭಾರತ ದೇಶದಲ್ಲಿ ಪ್ರಸ್ತುತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಗಾಂಧೀಜಿ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸುವುದು ಅಂದರೆ ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಮೌಲ್ಯಗಳನ್ನು ನಾವುಗಳು ಪಾಲಿಸಿದಾಗ ಮಾತ್ರ ಅವರಿಗೆ ಕೊಡ ಗೌರವ. ಸತ್ಯ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಪಾಲನೆಯಲ್ಲಿ ಸಮಾಜ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಗಾಂಧೀಜಿಗೆ ಗೌರವ ನೀಡಿದಂತೆ ಎಂದರು.
ಇದೇ ವೇಳೆ ಬಿಜೆಪಿ ಪಕ್ಷದ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರು ದೇಶವನ್ನು ಹಿಂದುತ್ವರಾಷ್ಟ್ರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಏಕ ಭಾಷೆ ಏಕ ಸಂಹಿತೆ ಜಾರಿಗೆ ತರಲು ಹೊರಟಿದ್ದಾರೆ. ದೇಶದ ಸಂವಿಧಾನದ ಮೇಲೆ ಇತ್ತೀಚಿನ ದಿನಗಳಲ್ಲಿ ದಾಳಿಯಾಗುತ್ತಿದೆ. ಇದರ ರಕ್ಷಣೆಯಾದರೆ ಮಾತ್ರ ನಮಗೆ ಉಳಿಗಾಲ. ನಾವೆಲ್ಲರೂ ಈಗ ಎರಡನೇ ಹೋರಾಟ ಮಾಡಲು ಸಿದ್ದರಾಗಬೇಕು. ಕಾಂಗ್ರೆಸ್ ಕಾರ್ಯಕರ್ತರಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.