ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಘಟನೆ ನಡೆದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಖಾತೆ ಬದಲಾವಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಖಾತೆ ಬದಲಾವಣೆ ವದಂತಿ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆ ವಿಚಾರ ಹೇಳಿದ್ದು ಯಾರು ಎಂದು ಪ್ರಶ್ನೆ ಮಾಡಿದರು.
ನಾನು ಸೌಮ್ಯದಿಂದಲೇ ನಡೆದುಕೊಂಡಿದ್ದೇನೆ. ಏನೇ ಇದ್ದರೂ ನನ್ನನ್ನೇ ಕೇಳಿ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ನಾನು ನನ್ನ ಪತ್ನಿಯ ಬಳಿಯೂ ರಾಜಕೀಯದ ವಿಚಾರ ಮಾತನಾಡುವುದಿಲ್ಲ. ಇಂತಹ ಖಾತೆ ಬೇಕು ಎಂದು ನಾನೂ ಎಲ್ಲೂ ಕೇಳಿಲ್ಲ. ಬೆಂಗಳೂರು ಘಟನೆಯಿಂದ ನಾವು ನೋವು ಅನುಭವಿಸುತ್ತಿದ್ದೇವೆ. ಇದು ಸವಾಲು, ಇದನ್ನು ಎದುರಿಸಬೇಕು. ಖಾತೆ ಬದಲಾವಣೆಯ ಬಗ್ಗೆ ನಾನು ಸಿಎಂ ಬಳಿ ಹೇಳಿಕೊಂಡಿಲ್ಲ. ಇದು ಸತ್ಯಕ್ಕೆ ದೂರವಾದದ್ದು, ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.





