ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನ (ಇವಿ) ಕ್ಷೇತ್ರದಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ. ದಾಖಲೆ ಪ್ರಮಾಣದಲ್ಲಿ ಇವಿ ವಾಹನಗಳ ಮಾರಾಟವಾಗಿದ್ದು, ಮಾರುಕಟ್ಟೆ ಹೊಸ ಮೈಲಿಗಲ್ಲು ತಲುಪಿದೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತಕ್ಕೆ ಪೂರೈಕೆಯಾಗುವ ಇಂಧನದಲ್ಲಿ ವ್ಯತ್ಯಯ ಉಂಟಾಗಿದೆ. ಎಲ್‍ಪಿಜಿ ಕೊರತೆ ಎದುರಾಗಿದ್ದು, ಪ್ರಿಮಿಯಂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್-ಡೀಸೆಲ್ ದರಗಳು ಮತ್ತಷ್ಟು ಏರಿಕೆಯಾಗುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಜನರು ಇವಿ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.
ಜನವರಿ-ಫೆಬ್ರವರಿ ತಿಂಗಳೊಂದಿಗೆ ಹೋಲಿಸಿದರೆ, ಮಾರ್ಚ್ ತಿಂಗಳ ಅಂತ್ಯಕ್ಕೆ ಇವಿ ಬೈಕ್, ಆಟೋ ಹಾಗೂ ಕಾರುಗಳ ಮಾರಾಟದಲ್ಲಿ ಶೇಕಡಾ 30ರಷ್ಟು ಏರಿಕೆ ಕಂಡುಬಂದಿದೆ. ಯುದ್ಧ ಮುಂದುವರೆದರೆ ಇಂಧನ ಕೊರತೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಭಯದಿಂದ ಜನರು ಮುಂಚಿತವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ ಎಂದು ಶೋರೂಂ ಸಿಬ್ಬಂದಿ ಹೇಳುತ್ತಿದ್ದಾರೆ.
ಇದಲ್ಲದೆ ಏಪ್ರಿಲ್‍ನಿಂದ ಜಾರಿಗೆ ಬಂದಿರುವ ಹೊಸ ರಸ್ತೆ ತೆರಿಗೆ ನೀತಿಯ ಪರಿಣಾಮವೂ ಮಾರ್ಚ್ ತಿಂಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಉತ್ತೇಜನ ನೀಡಿದೆ. ತೆರಿಗೆ ಏರಿಕೆಗೆ ಮುನ್ನವೇ ಹೆಚ್ಚಿನ ಜನರು ವಾಹನ ಖರೀದಿಗೆ ಮುಂದಾಗಿದ್ದಾರು.
ಪ್ರಮುಖವಾಗಿ, ಒಂದೇ ದಿನದಲ್ಲಿ ಸುಮಾರು 13 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ ನಡೆದಿದ್ದು, ಇದರಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಯುದ್ಧದ ಪರಿಣಾಮ ಹಾಗೂ ಹೊಸ ರಸ್ತೆ ತೆರಿಗೆ ನೀತಿಯ ಪ್ರಭಾವದಿಂದ ಮಾರ್ಚ್ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ದಾಖಲೆ ಮಟ್ಟ ತಲುಪಿದ್ದು, ಶೋರೂಂಗಳು ಮತ್ತು ಇವಿ ಕಂಪನಿಗಳಲ್ಲಿ ಖುಷಿ ಮೂಡಿಸಿದೆ.




