ಬೆಂಗಳೂರು: ಕಾಡಾನೆ ದಾಳಿಗೆ ಬನ್ನೇರುಘಟ್ಟ ವನ್ಯಜೀವಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ ಬಲಿಯಾಗಿದ್ದಾರೆ.
ಬನ್ನೇರುಘಟ್ಟ ವನ್ಯಜೀವಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಮಾದಣ್ಣ ಕಲ್ಕೆರೆ ಗಸ್ತಿನ ದೊಡ್ಡ ಬಂಡೆ ಅರಣ್ಯ ಪ್ರದೇಶದ ಬಳಿ ರಾತ್ರಿ 12:30ರ ಸುಮಾರಿನಲ್ಲಿ ಕಾವಲು ಕಾಯುತ್ತಿದ್ದ ಸಂದರ್ಭದಲ್ಲಿ ಕಾಡಾನೆಯ ದಾಳಿ ಮಾಡಿದೆ. ತೀವ್ರ ಹಾನಿಗೊಳಗಾಗ ಮಾದಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಳೆದ ಆರು ತಿಂಗಳಲ್ಲಿ ಒಂದೇ ಗ್ರಾಮದ ಮೂವರು ಆನೆ ದಾಳಿಗೆ ತುತ್ತಾಗಿದ್ದು, ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು, ಆನೆ ದಾಳಿಯಿಂದ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಇನ್ನು ಬನ್ನೇರುಘಟ್ಟ ವನ್ಯಜೀವಿ ವಲಯದಲ್ಲಿ ನಿನ್ನೆ ರಾತ್ರಿ ಕಾವಲು ಕಾಯುತ್ತಿದ್ದ ವೇಳೆ ಆನೆ ದಾಳಿಯಿಂದ ಮೃತಪಟ್ಟ ಅರಣ್ಯ ಸಿಬ್ಬಂದಿ ಮಾದಣ್ಣ ಪಾರ್ಥಿವ ಶರೀರಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಂತಿಮ ನಮನ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಆನೆಗಳ ಇರುವಿಕೆಯನ್ನು ಪತ್ತೆ ಮಾಡುವಲ್ಲಿ ನೈಪುಣ್ಯತೆ ಹೊಂದಿದ್ದ ಮಾದಣ್ಣ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಕಾಡಾನೆಯನ್ನು ತಕ್ಷಣ ಕಾಡಿಗೆ ಮರಳಿಸಲು ಕ್ರಮವಹಿಸುವಂತೆ ಮತ್ತು ಮೃತರ ಕುಟುಂಬಕ್ಕೆ ನಿಯಮಾನುಸಾರ ತತ್ ಕ್ಷಣವೇ ಪರಿಹಾರ ವಿತರಿಸುವಂತೆ ಸೂಚಿಸಿದ್ದೇನೆ ಎಂದರು.