ಬೆಂಗಳೂರು : ಅನಧಿಕೃತ ಪ್ಲೆಕ್ಸ್ ತಲೆ ಮೇಲೆ ಬಿದ್ದು, ವೃದ್ಧ ಕೋಮಾಗೆ ಜಾರಿರುವ ಘಟನೆ ರಾಜಧಾನಿ ಬೆಂಗಳೂರಿನ ಯಲಹಂಕ ಸಿಂಗನಾಯಕನಹಳ್ಳಿಯಲ್ಲಿ ನಡೆದಿದೆ. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹುಟ್ಟುಹಬ್ಬಕ್ಕೆ ಶುಭಕೋರಿ ಬೃಹತ್ ಗಾತ್ರದ ಪ್ಲೆಕ್ಸ್ ಅನ್ನು ಹಾಕಲಾಗಿತ್ತು. ಆದರೆ ಬಿಬಿಎಂಪಿ ಮಾತ್ರ ಈ ಅನಧಿಕೃತ ಫ್ಲೆಕ್ಸ್ ಅನ್ನು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಈಗ ವೃದ್ಧರೊಬ್ಬರ ಜೀವಕ್ಕೆ ಆಪತ್ತು ಬಂದಿದೆ.
ರಾಜಾನುಕುಂಟೆಯ ನಿವಾಸಿಯಾಗಿರುವ ಭಕ್ತವತ್ಸಲ ಅವರು ತನ್ನ ಮೊಮ್ಮಗಳನ್ನ ಶಾಲೆಯಿಂದ ಕರೆದುಕೊಂಡು ಬರಲು ಬೈಕ್ ಚಲಾಯಿಸಿಕೊಂಡು ಹೋಗ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದಾರೆ. ಸದ್ಯ ಅವರಿಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.