ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣವೂ ಒಳ್ಳೆಯ ರಾಜಕಾರಣದ ಲಕ್ಷಣವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
ಶಾಸಕ ಮುನಿರತ್ನ ಕೆ.ಸಿ.ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಮುನಿರತ್ನ ಆರೋಗ್ಯವನ್ನು ವಿಚಾರಿಸಿದ ನಂತರ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮುನಿರತ್ನ ಅವರನ್ನು ಪರೀಕ್ಷಿಸಿದ್ದೇನೆ. ಸಾಮಾನ್ಯವಾಗಿ ತಲೆಗೆ ಪೆಟ್ಟು ಬಿದ್ದಾಗ ವಾಂತಿ ಮತ್ತು ತಲೆ ಸುತ್ತು ಬರುವುದು ಸಹಜ. ಹೀಗಾಗಿ ಫಿಜಿ಼ಶಿಯನ್‌ಗೆ ಸಿಟಿ ಸ್ಕ್ಯಾನ್ ಮಾಡಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ದೇಶಕ್ಕೆ ಸಂವಿಧಾನ ಬಂದು 75 ವರ್ಷಗಳು ಕಳೆದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಗೌರವ ನೀಡಬೇಕು. ಚುನಾವಣೆಯಲ್ಲಿ ಸ್ಪರ್ಧಾತ್ಮಕವಾಗಿದ್ದು, ಸೋಲು-ಗೆಲುವು ಸಹಜ. ಯಾರೇ ಆಗಲಿ ಸಂವಿಧಾನಕ್ಕೆ ಬೆಲೆ ಮತ್ತು ಗೌರವ ನೀಡುವಂತೆ ನಡೆದುಕೊಳ್ಳಬೇಕು. ಹೀಗಿದ್ದರೂ ಇಂತಹ ಘಟನೆಗಳು ನಡೆದಿದೆ ಎಂದರೆ ಇದು ಬಹಳ ಖಂಡನೀಯವಾಗಿದೆ. ಎಲ್ಲೋ ಒಂದು ಕಡೆ ಸರ್ಕಾರದ ವ್ಯವಸ್ಥೆ ಹಾದಿ ತಪ್ಪುತ್ತಿದೆ ಎಂದು ಹೇಳಿದ್ದಾರೆ.





