ಬೆಂಗಳೂರು: ಈ ಬಾರಿಯಾದರೂ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಮುಂದಿನ ತಿಂಗಳ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್, ಜೆ.ಪಿ.ನಡ್ಡಾ ಹಾಗೂ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಿ.ಪರಮೇಶ್ವರ್ ಅವರು, ಮುಂದಿನ ತಿಂಗಳು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳಿಗೆ ಹಣ ಬರಬೇಕು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಲ್ಲಿಸಿದ್ದು, ಅದನ್ನು ಮತ್ತೆ ಕೊಟ್ಟರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇನ್ನೂ ಅನೇಕ ಯೋಜನೆ ಸಂಪೂರ್ಣಗೊಂಡಿಲ್ಲ. ಅವುಗಳಿಗೆ ಬರಬೇಕಾದ ಹಣ ನೀಡಬೇಕು. ಅದನ್ನ ಈ ಬಜೆಟ್‍ನಲ್ಲಾದ್ರೂ ಕೊಡಬೇಕು. ನಾವು ಅತಿ ಹೆಚ್ಚು ಜಿ.ಎಸ್.ಟಿ ಕಟ್ಟುತ್ತೇವೆ. ಅದರಂತೆ ಬಜೆಟ್ ಅನುದಾನ ಹಂಚಿಕೆಯಾಗಬೇಕು, ನಮಗೆ ಬರಬೇಕು. ಬಾಕಿ ಕೊಡುವ ಬಗ್ಗೆ ಉತ್ತಮ ವ್ಯವಸ್ಥೆ ಮಾಡಿದರೆ ಉತ್ತಮ. ಯಾವ ರೀತಿ ಮಾಡುತ್ತಾರೆಯೋ ಕಾದು ನೋಡೋಣ ಎಂದರು.
ಇನ್ನು ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಲು ಪೊಲೀಸ್ ಇಲಾಖೆ, ಕಂದಾಯ ಇಲಾಖೆ , ಕಾನೂನು ಇಲಾಖೆ ಜೊತೆಗೂಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂಬಂಧ ಕೇಂದ್ರ ಸರ್ಕಾರದ ಕೆಲವು ಹಾಗೂ ರಾಜ್ಯ ಸರ್ಕಾರದ ಕೆಲವು ಕಾನೂನುಗಳಿವೆ. ಎಲ್ಲವನ್ನು ಸಂಯೋಜಿಸಿ ನಿಯಂತ್ರಣ ಮಾಡಬೇಕು. ಹೀಗಾಗಿ ಮೈಕ್ರೋ ಫೈನಾನ್ಸ್ ಮಾಡುವವರಿಂದ ಸಾಲ ವಸೂಲಿ ಮಾಡುವ ವೇಳೆ ಕೆಲವೆಡೆ ಗಲಾಟೆಗಳಾಗಿವೆ. ಕೆಲವು ಘಟನೆಗಳು ಆಗಿವೆ. ಆತಹತ್ಯೆಯಂತಹ ಪ್ರಕರಣಗಳೂ ನಡೆದಿವೆ. ಹಾಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ಪಷ್ಟವಾದ ನಿರ್ಣಯ ಮಾಡುತ್ತೇವೆ ಎಂದು ಹೇಳಿದರು.