ಬೆಂಗಳೂರು : ತಮ್ಮ ರಕ್ಷಣೆಗಾಗಿ ಬೇರೆಯವರ ವಿರುದ್ಧ ಆರೋಪ ಮಾಡುವುದು ಜೆಡಿಎಸ್ ನಾಯಕರಿಗೆ ಅಭ್ಯಾಸವಾಗಿದೆ ಎಂದು ಸೂರಜ್ ರೇವಣ್ಣ ವಿರುದ್ಧದ ಆರೋಪದ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಇದೆ ಎಂಬ ಆರೋಪಕ್ಕೆ ಮಾಜಿ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್ , ದೇವೇಗೌಡರ ಕುಟುಂಬ, ಮಾಜಿ ಪ್ರಧಾನಿಗಳ ಕುಟುಂಬ. ಅವರ ಬಗ್ಗೆ ನೀವು ಯಾರು ಮಾತನಾಡಬಾರದು. ನಾವು ಮಾತಾಡಿದ್ರೆ ತಪ್ಪು ಆಗುತ್ತದೆ. ರಾಜ್ಯದ ಜನ ಗಮನಿಸುತ್ತಾರೆ, ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಇದೇ ವೇಳೆ ಇದರ ಹಿಂದೆ ಷಡ್ಯಂತ್ರ ಇದೆ ಎಂಬ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಏನಕ್ಕೆ ಹೇಳಿದ್ದಾರೆ, ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಅವರ ದೃಷ್ಟಿಕೋನಗಳು ಬಹುಶಃ ಅವರ ರಕ್ಷಣೆಗೆ ಬೇರೆಯವರ ಮೇಲೆ ಹೇಳೋದು ಅಭ್ಯಾಸ ಆಗಿದೆ. ಬೇರೆಯವರನ್ನ ಬೊಟ್ಟು ಮಾಡಿ ತೋರಿಸಿ, ಬೇರೆಯವರನ್ನ ಇದಕ್ಕೆ ಎಳೆದುಕೊಂಡು ರಕ್ಷಣೆ ಪಡೆದುಕೊಳ್ಳುವ ಕೆಲಸವಿದು ಎಂದು ಟಾಂಗ್ ಕೊಟ್ಟಿದ್ದಾರೆ.