ಬೆಂಗಳೂರು : ೨೦೨೩-೨೪ರ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಡಿಸಿಎಂ ಡಿಕೆಶಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಂಕೀತಾ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ವಿದ್ಯಾರ್ಥಿ ನವನೀತ್‌ನನ್ನು ಮನೆಗೆ ಆಹ್ವಾನಿಸಿ ಬಹುಮಾನ ನೀಡಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಂಕಿತಾಗೆ ೫ಲಕ್ಷ ನಗದು ನೀಡದ್ದು, ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್‌ಗೆ ೨ಲಕ್ಷ ರೂ ಬಹುಮಾನ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಬಾಗಲಕೋಟೆ ವಿದ್ಯಾರ್ಥಿ ೬೨೫ಕ್ಕೆ ೬೨೫ ಅಂಕ ಪಡೆದಿರುವುದನ್ನು ಕಂಡು ಸಂತೋಷವಾಯಿತು. ತಕ್ಷಣ ಆಕೆಗೆ ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದೆ ಎಂದರು.
ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ಬರುವಂತೆ ಆಹ್ವಾನ ಮಾಡಿದ್ದೆ. ಸರ್ಕಾರದ ಪರವಾಗಿ ಅವರನ್ನು ಅಭಿನಂದಿಸಿದ್ದೇನೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಬಹುಮಾನದ ರೂಪದಲ್ಲಿ ನೀಡುತ್ತಿದ್ದೇನೆ ಎಂದು ತಿಳಿಸಿದರು. ಅದಲ್ಲದೇ ಈ ಬಾಲಕಿಯ ಸಾಧನೆ ಮೂಲಕ ನಮ್ಮ ಸರ್ಕಾರಿ ಶಾಲೆಗಳು ಹಾಗೂ ಶಾಲೆಯ ಶಿಕ್ಷಕರು ಸಮರ್ಥರಿದ್ದಾರೆ ಎಂಬ ಭಾವನೆ ಮೂಡಿತು. ಗ್ರಾಮೀಣ ಭಾಗದ ಪಂಚಾಯ್ತಿಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ವಿಶ್ವ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮಾಡುವುದು ನನ್ನ ಗುರಿ ಎಂದು ತಿಳಿಸಿದರು.