ಬೆಂಗಳೂರು: ಬಿಜೆಪಿ ಪಕ್ಷ ಧಾರ್ಮಿಕ ಆಚರಣೆ ಮತ್ತು ನಂಬಿಕೆಯನ್ನು ರಾಜಕೀಯಕ್ಕಾಗಿ ಹುಡುಕುತ್ತಿದ್ದು, ಅವುಗಳನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.5) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಧರ್ಮ, ನಂಬಿಕೆ, ಶ್ರದ್ಧೆ ಮತ್ತು ಆಚರಣೆಗೆ ಸಂಬಂಧಿಸಿದ ವಿಚಾರಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿವೆ. ನಾವು ಪ್ರತಿಯೊಂದಕ್ಕೂ ಧರ್ಮಕ್ಕೆ ಗೌರವ ನೀಡಬೇಕು. ಆದರೆ ಬಿಜೆಪಿ ಪಕ್ಷ ಅವುಗಳನ್ನು ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಆರ್.ಅಶೋಕ್ ಅವರ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುವ ಕುರಿತಾದ ಟೀಕೆ ಬಗ್ಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಅಶೋಕ್ ಅವರ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಅವರು ಟ್ವೀಟ್ ಆದರೂ ಮಾಡಲಿ, ಭಾಷಣವಾದರೂ ಮಾಡಲಿ ಅವರಿಗೆ ಉತ್ತರ ನೀಡಲು ನನಗೆ ಇಷ್ಟ ಇಲ್ಲ. ಕೆಲವರಿಗೆ ನನ್ನ ಹೆಸರು ಹೇಳದಿದ್ದರೆ ಮಾರ್ಕೆಟ್ ಇರುವುದಿಲ್ಲ. ನನ್ನ ಹೆಸರು ತೆಗೆದುಕೊಳ್ಳದಿದ್ದರೆ, ನಿದ್ದೆಯೂ ಬರುವುದಿಲ್ಲ, ಶಕ್ತಿಯೂ ಬರುವುದಿಲ್ಲ ಎಂದು ತಿರುಗೇಟು ನೀಡಿದರು.
ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಧರ್ಮ, ನಮ್ಮ ಕರ್ಮ ಮತ್ತು ಆಚಾರ ವಿಚಾರ. ಅನವಶ್ಯಕವಾಗಿ ಈ ವಿಚಾರಗಳನ್ನು ಎಳೆದಾಡಲು ನಾನು ಹೋಗುವುದಿಲ್ಲ ಎಂದು ತಿಳಿಸಿದರು.
ಇನ್ನೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.