ಬೆಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸರಣಿ ಕೊಲೆಗಳು, ಅತ್ಯಾಚಾರ ಕೃತ್ಯಗಳ ತನಿಖೆಯನ್ನು ಆರಂಭಿಸಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ದೂರು ನೀಡಿರುವ ಅನಾಮೇಧಯ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದು, ಸ್ಥಳ ಮಹಜರಿಗೆ ಸಿದ್ಧತೆ ಮಾಡಿಕೊಂಡಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಅದರಲ್ಲೂ ಹೆಣ್ಣು ಮಕ್ಕಳ, ಮಹಿಳೆಯರನ್ನು ಅತ್ಯಾಚಾರ, ಕೊಲೆ ಮಾಡಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ದೂರು ನೀಡಿದ್ದು, ತಾವೇ ಹಲವಾರು ಮೃತದೇಹಗಳನ್ನು ಹೂತಿದ್ದು ಅವುಗಳನ್ನು ಹೊರತೆಗೆಯುತ್ತೇನೆಂದು ಹೇಳಿದ್ದಾರೆ.
ಎಸ್‍ಐಟಿ ಮುಖ್ಯಸ್ಥ ಅನುಚೇತ್ ಹಾಗು ಎಸ್ಪಿ ಜಿತೇಂದ್ರ ಕುಮಾರ್ ದಯಮಾ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ವಕೀಲರ ಜೊತೆ ದೂರು ಕೊಟ್ಟ ಅನಾಮಿಕ ವಿಚಾರಣೆಗೆ ಹಾಜರಾಗಿದ್ದಾನೆ ಎನ್ನಲಾಗ್ತಿದೆ. ಅಧಿಕಾರಿಗಳು ಸಾಕ್ಷ್ಯ ದೂರು ದಾರನಿಗೆ ಬುರುಡೆ ಅಗೆದ ಜಾಗವನ್ನ ತೋರಿಸುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಅನಾಮಿಕ ಕೊಟ್ಟ ಬುರುಡೆ ಎಫ್ ಎಸ್ ಎಲ್ ಲ್ಯಾಬ್ ನಲ್ಲಿದೆ. ಆದರೆ ಈ ಬುರುಡೆ ಧರ್ಮಸ್ಥಳ ಗ್ರಾಮದಿಂದಲೇ ತೆಗೆದಿದ್ದ ಎಂಬ ಬಗ್ಗೆ ತನಿಖೆಗೆ ಎಸ್‍ಐಟಿ ಮುಂದಾಗಿದೆ. ಅನಾಮಿಕ ದೂರುದಾರನ ಮೂಲಕವೇ ಬುರುಡೆ ಅಗೆದ ಜಾಗದ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಲಿದ್ದಾರೆ.
ಜಾಗದ ಪರಿಶೀಲನೆ ಬಳಿಕ ಆ ಜಾಗದ ಮಣ್ಣಿನ ಎಫ್‍ಎಸ್‍ಎಲ್ ಪರೀಕ್ಷೆ ಕೂಡ ನಡೆಯಲಿದೆ. ಅನಾಮಿಕ ಕೊಟ್ಟ ಬುರುಡೆಯಲ್ಲಿರೋ ಮಣ್ಣಿನ ಕಣ ಮತ್ತು ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ತೋರಿಸುವ ಜಾಗದ ಮಣ್ಣಿನ ಪರೀಕ್ಷೆ ನಡೆಯಲಿದ್ದು, ಎರಡೂ ಮಣ್ಣಿನ ಕಣಗಳನ್ನು ಮ್ಯಾಚ್ ಮಾಡಿ ನೋಡಿ ಬಳಿಕ ಬುರುಡೆ ಧರ್ಮಸ್ಥಳ ಗ್ರಾಮದಲ್ಲೇ ತೆಗೆದಿದ್ದ ಅನ್ನೋದನ್ನ ಖಚಿತ ಪಡಿಸಿಕೊಳ್ಳಲು ಎಸ್‍ಐಟಿ ಮುಂದಾಗಿದೆ. ಎಸ್ ಐ ಟಿ ಅಧಿಕಾರಿಗಳು ಅನಾಮಿಕನನ್ನು ವಿಚಾರಣೆಗೆ ಒಳಪಡಿಸಿದ್ದು, ನಾನಾ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದಾರೆ. ಅನಾಮಿಕ ಹೇಳಿಕೆಯನ್ನ ಇನ್ ಕ್ಯಾಮೆರಾದಲ್ಲಿ ದಾಖಿಸಲಿದ್ದಾರೆ.





