ಮಂಗಳೂರು: ಧರ್ಮಸ್ಥಳ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ ಪ್ರಕರಣ ಸಂಬಂಧ ರಚಿಸಲಾಗಿರುವ ಎಸ್‌ಐಟಿ ತಂಡದಲ್ಲಿ ನಿಯೋಜಿಸಿದ್ದ ಇನ್‌ಸ್ಪೆಕ್ಟರ್ ಮಂಜುನಾಥ್ ದೂರುದಾರನಿಗೆ ಬೆದರಿಕೆ ಒಡ್ಡಿದ್ದಾರೆ. ಶವ ಹೂತ ಪ್ರಕರಣದ ದೂರನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ನೀನು ಜೈಲು ಪಾಲಾಗುವ ಸಾಧ್ಯತೆ ಇದೆ ಎಂದು ಬೆದರಿಕೆ ಹಾಕಿದ್ದಾರೆಂದು ದೂರುದಾರನ ಪರ ವಕೀಲ ಆರೋಪಿಸಿದ್ದಾರೆ.
ಶುಕ್ರವಾರ ಶೋಧಕಾರ್ಯ ಮುಗಿದ ಬಳಿಕ, ಈ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಎಸ್‌ಐಟಿಗೆ ಒಬ್ಬರು ಅನನ್ಯಾ ಎಂಬವರು ಮೈಲ್ ಮಾಡಿದ್ದರು. ಆದರೆ ದೂರುದಾರನ ಈ ಆರೋಪ ನಿರಾಧಾರ ಎಂದು ಎಸ್‌ಐಟಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
ಅನಧಿಕೃತವಾಗಿ ನೂರಾರು ಶವ ಹೂಳಿದ್ದೇನೆ ಎಂದು ದೂರದಾರನ ಹೇಳಿಕೆ ಮೇಲೆ ಎಸ್‌ಐಟಿ 4 ದಿನಗಳ ನೆಲ ಅಗೆಯುವ ಕಾರ್ಯ ಪೂರ್ಣಗೊಳಿಸಿದ್ದು, ಶುಕ್ರವಾರ ಯಾವುದೇ ಕುರುಹು ಸಿಕ್ಕಿಲ್ಲ. ಶನಿವಾರ ಮಳೆ ನಡುವೆಯೇ 9 ನೇ ಪಾಯಿಂಟ್‌ನಲ್ಲಿ ಅಗೆಯುವ ಕೆಲಸ ಆರಂಭ ಆಗಿದೆ. ಇನ್ನು ಇಂದು ತನಿಖಾ ಸ್ಥಳದಲ್ಲಿ ಇನ್‌ಸ್ಪೆಕ್ಟರ್ ಮಂಜುನಾಥ್ ಕೂಡಾ ಕಂಡುಬರಲಿಲ್ಲ. ಹೀಗಾಗಿ ದೂರುದಾರನ ಆರೋಪದ ಬಗ್ಗೆ ಕುತೂಹಲ ಮೂಡಿವೆ.
ಹೆಚ್ಚಿದ ಗೌಪ್ಯತೆ
ಈಗಾಗಲೇ ಎಂಟು ಕಡೆಗಳಲ್ಲಿ ಶೋಧಕಾರ್ಯ ನಡೆಸಲಾಗಿದೆ. 6 ನೇ ಪಾಯಿಂಟ್ ನಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದವು. ಆದರೆ ಉಳಿದ ಯಾವುದೇ ಸ್ಥಳದಲ್ಲಿ ಕುರುಹು ಸಿಕ್ಕಿಲ್ಲ. ಧರ್ಮಸ್ಥಳದ ನೇತ್ರಾವತಿ ತಟದ ದಟ್ಟ ಕಾಡಿನಲ್ಲಿ ಎಸ್‌ಐಟಿ ತಂಡ ಹುಡುಕಾಟ ನಡೆಸುತ್ತಿದೆ. ದೂರದಾರನ ಸಮ್ಮುಖದಲ್ಲೇ ಕಾರ್ಮಿಕರು ಹಾಗೂ ಹಿಟಾಚಿಯಿಂದ ನೆಲ ಅಗೆದು ಅಸ್ತಿಪಂಜರಕ್ಕಾಗಿ ಹುಟುಕಾಟ ನಡೆಸುತ್ತಿದ್ದಾರೆ. ಕಾರ್ಯಾಚರಣೆಯ ಗೌಪ್ಯತೆ ಕಾಪಾಡಲು ಹಸಿರು ಪರದೆ ಕಟ್ಟಿ ಬಂದ್ ಮಾಡಲಾಗುತ್ತಿದೆ. ಸ್ಥಳ 9, ರಸ್ತೆಯ ಪಕ್ಕದಲ್ಲೇ ಇದೆ, ಸಾರ್ವಜನಿಕರು ಹೆಚ್ಚಾಗಿ ಓಡಾಟ ನಡೆಸುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಗೌಪ್ಯತೆ ಕಾಪಾಡಲಾಗಿದೆ.



