ಧರ್ಮಸ್ಥಳ : ಸೋಮವಾರ ನಡೆದ ಉತ್ಖನನ ವೇಳೆ ಸುಮಾರು 100 ಮೂಳೆಗಳು ಮತ್ತು ತಲೆಬುರುಡೆ ಪತ್ತೆಯಾಗಿದ್ದವು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನಘಟ್ಟ ಬಳಿಯ ಅರಣ್ಯ ಪ್ರದೇಶದಲ್ಲಿ ಆರನೇ ದಿನದಲ್ಲಿ ಈ ಅವಶೇಷಗಳು ಪತ್ತೆಯಾಗಿದ್ದು, ತಲೆಬುರುಡೆ, ಬೆನ್ನುಮೂಳೆಯ ಮೂಳೆಗಳು ಸೇರಿದಂತೆ ಸುಮಾರು 100 ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೂರುದಾರ ತೋರಿಸಿದ 11ನೇ ಸ್ಥಳದಿಂದ ಸುಮಾರು 100 ಮೀಟರ್ ಅಂತರದಲ್ಲಿ ಈ ಮಾನವ ಅವಶೇಷಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ಪತ್ತೆಯಾದ ಅಸ್ಥಿಪಂಜರದ ಭಾಗಗಳು ಇಬ್ಬರು ವ್ಯಕ್ತಿಗಳಿಗೆ ಸೇರಿರಬಹುದು ಎನ್ನಲಾಗಿದೆ. ಉದ್ದವಾದ ಬೆನ್ನುಮೂಳೆಯ ಪಟ್ಟಿ ಕೂಡ ಕಂಡುಬಂದಿದೆ. ತಜ್ಞರ ತಂಡ ವೈಜ್ಞಾನಿಕವಾಗಿ ಇವುಗಳನ್ನು ಸಂಗ್ರಹಿಸಿದೆ.
ಕುತೂಹಲ ಮೂಡಿಸಿದ ದೂರುದಾರನ ನಡೆ:- ದೂರುದಾರ ಈ ಹಿಂದೆ ಧರ್ಮಸ್ಥಳ ಸ್ನಾನಘಟ್ಟದ ಬಳಿ ಮತ್ತು ಅರಣ್ಯದೊಳಗೆ 13 ಶವ ಹೂತಿಟ್ಟ 13 ಸಂಭವನೀಯ ಜಾಗಗಳನ್ನು ಗುರುತಿಸಿದ್ದರು. ಇವುಗಳಲ್ಲಿ 11 ಜಾಗಗಳಲ್ಲಿ ಇಲ್ಲಿಯವರೆಗೆ ಉತ್ಖನನ ಮಾಡಲಾಗಿದೆ. ಸೋಮವಾರ 11ನೇ ಜಾಗದಲ್ಲಿ ಜಾಗ ಅಗೆಯುವಿಕೆಗೆ ನಿರ್ಧರಿಸಲಾಗಿತ್ತು. ಆದರೆ, ದೂರುದಾರ ಅದರ ಬದಲಾಗಿ ಹತ್ತಿರದ ಬೇರೆ ಸ್ಥಳದಲ್ಲಿ ಅಗೆಯಲು ಮನವಿ ಮಾಡಿದ್ದರು.





