ಬೆಂಗಳೂರು: ಜಿಎಸ್‍ಟಿ ಕಡಿತ ಮತ್ತು ಸರಳೀಕರಣ ಮಾಡಲು ತೀರ್ಮಾನಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಬಸವರಾಜ ಬೊಮ್ಮಾಯಿ ಅವರು, ಜಿಎಸ್‍ಟಿ ಸರಳೀಕರಣದಿಂದ ದೇಶದ ಜಿಡಿಪಿ ಎರಡಂಕಿಗೆ ಹೆಚ್ಚಳವಾಗಲಿದ್ದು, ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಿಂದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ನಿಮ್ಮ ನಾಯಕತ್ವದಲ್ಲಿ ನಮ್ಮ ದೇಶದ ಆರ್ಥಿಕತೆ ಬಲಗೊಳಿಸಲು ಬಲಿಷ್ಠ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ತರುತ್ತಿರುವುದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ನಿಮ್ಮ ಬದ್ದತೆಯಿಂದಾಗಿ ದೇಶದ ತೆರಿಗೆ ಕಾಯ್ದೆಗಳ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿಎಸ್‌ಟಿ ಜಾರಿ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದ್ದೀರಾ ಎಂದು ತಿಳಿಸಿದ್ದಾರೆ.





