ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಧಾರಾಕಾರ ಮಳೆಯಾಗಿದ್ದು, ಮಹಾಮಳೆಗೆ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಇನ್ನೂ ಒಂದು ವಾರ ಮಳೆ ಮುಂದುವರೆಯಲಿದ್ದು, ವರುಣನ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ದಾವಣಗೆರೆ, ಉಡುಪಿ, ಕಾರ್ಕಳ, ಕುಂದಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕೆರೆ ಕಟ್ಟೆಗಳು ಭರ್ತಿಯಾಗತೊಡಗಿವೆ. ಹೊಲಗದ್ದೆಗಳು ಜಲಾವೃತವಾಗಿವೆ.
ಹಲವೆಡೆ ಮನೆಗಳು ಕುಸಿದು ಬಿದ್ದಿದ್ದು, ಮಾವು, ಹಲಸು, ಹೂ-ಹಣ್ಣು, ತರಕಾರಿ ಬೆಳೆಗಳು ನಾಶವಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹೊಲಗದ್ದೆಗಳಿಗೂ ನೀರು ನುಗ್ಗಿದ ಪರಿಣಾಮ ಹಣ್ಣು, ತರಕಾರಿ, ಬೆಳೆ ನಾಶವಾಗಿ ರೈತರಿಗೆ ಅಪಾರ ಹಾನಿಯುಂಟಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಪ್ರಮಾಣದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಮಲೆನಾಡು ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇನ್ನು ಮೂರ್ನಾಲ್ಕು ದಿನಗಳಲ್ಲಿ ನೈರುತ್ಯ ಮುಂಗಾರು ಪ್ರಾರಂಭವಾಗಲಿದ್ದು, ಈಗಾಗಲೇ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಕಡು ಬೇಸಿಗೆಯಲ್ಲೇ ನಿರಂತರ ಮಳೆಯಿಂದಾಗಿ ಗರಿಷ್ಠ ತಾಪಮಾನದಲ್ಲಿ ಗಣನೀಯ ಕುಸಿತವಾಗಿ ವಾತಾವರಣ ತಂಪಾಗಿದ್ದು, ಚಳಿಯ ಅನುಭವವಾಗುತ್ತಿದೆ.
ದ.ಕನ್ನಡ, ಉಡುಪಿ, ಕರಾವಳಿ ಭಾಗದ ವಿವಿಧೆಡೆ ಮಳೆ ಸುರಿಯುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಸಿಗರು, ಸಾರ್ವಜನಿಕರು ಕೂಡ ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಕರಾವಳಿಗೆ ಹೊಂದಿಕೊಂಡಂತೆ ಅರಬ್ಬೀ ಸಮುದ್ರದಲ್ಲಿ ಮೇ.22ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.