ಬೆಂಗಳೂರು: ಚಂದ್ರಶೇಖರನಾಥ ಸ್ವಾಮೀಜಿಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಪ್ರಕರಣದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ನೀಡುವ ಹೇಳಿಕೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಆರ್.ಅಶೋಕ್ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಂದ್ರಶೇಖರನಾಥ ಸ್ವಾಮೀಜಿ ಅವರ ಪ್ರಕರಣದ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಆದರೆ ಅಶೋಕ್ ಇದೇ ವಿಚಾರವನ್ನು ಯಾಕೆ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈ ಹಿಂದೆ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಕೇಸ್ ಹಾಕಿದಾಗ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಟ್ಯಾಪ್ ಮಾಡಿದಾಗ ಎಲ್ಲಿ ಹೋಗಿದ್ದರೂ? ಯಾಕೆ ಆ ವೇಳೆ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ನಮ್ಮ ದೇಶದ ಸಂವಿಧಾನದ ಪ್ರಕಾರ ಜಾತ್ಯಾತೀತ ಹಾಗೂ ಸಮಾಜವಾದಿಯಾಗಿ ಬದುಕುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕುರಿತು ಯಾರು ಯಾರಾ ಹಕ್ಕುಗಳ ಬಗ್ಗೆ ಮತ್ತು ಜಾತಿಯ ಬಗ್ಗೆ ಮಾತನಾಡುವುದು ಬೇಡವೆಂದು ನಾನು ನಮ್ಮ ರಾಜ್ಯದ ಎಲ್ಲ ಸ್ವಾಮೀಜಿಗಳಿಗೂ ಮನವಿ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಸಂವಿಧಾನ ಹಾಗೂ ಮಾನವ ಧರ್ಮ ಎರಡಕ್ಕೂ ಆದ್ಯತೆ ನೀಡಲಾಗಿದೆ. ಅಲ್ಲದೇ ಕಾನೂನಿಗಿಂತ ಯಾರು ದೊಡ್ಡವರಲ್ಲ. ನಾನು ಕೂಡ ಮುಸ್ಲಿಮರಿಗೆ ಮತದಾನ ಇಲ್ಲದಂತೆ ಮಾಡಬೇಕು ಎಂದು ಹೇಳಿದರೂ ಕೂಡ ನನ್ನ ಮೇಲೂ ಕೇಸ್ ಹಾಕುತ್ತಾರೆ ಎಂದರು.