ಬೆಂಗಳೂರು: ಸಿನಿಮಾ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ. ಆದರೆ ಅವರಿಗೆ ಫಿಲಂ ಪ್ರಮೋಷನ್‌ಗೆ ಜನರೂ ಬೇಕು, ಸರ್ಕಾರವೂ ಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.4) ನಟ್ಟು, ಬೋಲ್ಟ್ ಟೈಟು ಮಾಡುವ ಹೇಳಿಕೆಗೆ ಚಿತ್ರರಂಗ ಟೀಕೆ ಮಾಡುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿನಿಮಾದವರು ಟೀಕೆ ಮಾಡಲಿ ಎಂದು ಹೇಳುತ್ತಿದ್ದೇನೆ. ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎಂದು ನನಗೂ ಗೊತ್ತಿದೆ, ಅದು ಸಹಾಯ ಮಾಡಿಸಿಕೊಂಡವರಿಗೂ ಗೊತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಹಣ, ನೆಲ, ಜಲ ಹಾಗೂ ಭಾಷೆ ಸಿನಿಮಾದವರಿಗೂ ಅನ್ವಯಿಸುತ್ತದೆ. ಆದರೆ ಇದೀಗ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಮಾಡಿದ್ದು, ಕನ್ನಡ ಚಿತ್ರರಂಗ ಬೆಳೆಯಲಿಯೆಂದು ಅಷ್ಟೇ. ಸಿನಿಮಾ ಕಲಾವಿದ ರು ಅವರ ಚಿತ್ರಗಳಿಗೆ ಅವರ ಪ್ರಚಾರ ಮಾಡದೇ, ನಾವು ಬೆಳಿಗ್ಗೆ-ಸಂಜೆ ಮಾಡೋಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರನ್ನು ಆಹ್ವಾನ ಮಾಡದೇ ಇರುವ ಬಗ್ಗೆ ಮಾತನಾಡಿದ ಅವರು, ನಾಗಾಭೃಣ ಅವರಿಗೆ ಆಮಂತ್ರಣ ನೀಡದೆ ಇರಬಹುದು. ಇದರಲ್ಲಿ ಇಲಾಖೆಯ ತಪ್ಪಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಕಾರ್ಯಕ್ರಮ ಅವರದ್ದು, ನನಗೆ ಗೊತ್ತು ಅವರು ಟೀಕಿಸಿತ್ತಾರೆಂದು ಆದರೆ ಅವರು ಟೀಕಿಸಿದರೂ ಸರಿಯೇ ನನಗೇನೂ ಬೇಜಾರಿಲ್ಲ. ನಾವು ತಪ್ಪು ಮಾಡಿದ್ದರೆ ನಾವೇ ಸರಿ ಮಾಡಿಕೊಳ್ಳುತ್ತೇವೆ. ಅವರ ಕಡೆಯಿಂದ ತಪ್ಪಾಗಿದ್ದರೆ ಅವರು ಸರಿ ಮಾಡಿಕೊಳ್ಳಲಿ ಎಂದು ತಿಳಿಸಿದರು.





