ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಐದು ತಿಂಗಳ ನಂತರ ಬಿಡುಗಡೆಯಾಗಲಿದ್ದಾರೆ. ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್ ಬಂಧನದಿಂದ ಇಲ್ಲಿಯವರೆಗೂ ಏನೆಲ್ಲಾ ಆಯ್ತು ಎಂಬುದರ ಮಾಹಿತಿ ಇಲ್ಲಿದೆ.
ನಟ ದರ್ಶನ್ ಡೇವಿಲ್ ಸಿನಿಮಾದ ಶೂಟಿಂಗ್‌ಗಾಗಿ ಮೈಸೂರಿನಲ್ಲಿ ತಂಗಿದ್ದ ವೇಳೆ ಜೂನ್ 11 ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. 11 ದಿನಗಳ ಕಾಲ ಪೊಲೀಸರ ಕಸ್ಟಡಿಯಲ್ಲಿ ವಿಚಾರಣೆಯನ್ನು ಎದುರಿಸಿದ್ದರು.
ವಿಚಾರಣೆ ಬಳಿಕ ದರ್ಶನ್ ನ್ಯಾಯಂಗ ಬಂಧನದ ಮೂಲಕ ಪರಪ್ಪನ ಅಗ್ರಹಾರದ ಜೈಲು ಸೇರಿದರು. ಬಳಿಕ ದರ್ಶನ್ ತಮ್ಮ ವಕೀಲರ ಮೂಕ ಕೋರ್ಟ್ ವಿಚಾರಣೆ ಬಂದಾಗಲೆಲ್ಲಾ ವಾಪ-ಪ್ರತಿವಾದಗಳು ಬಲವಾಗಿ ಕೂಡಿದ್ದವು. ಹೀಗಾಗಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೂಡಲಾಗುತ್ತಿತ್ತು.
ಈ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜ್ಯಾತಿಥ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. 69 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಕಳೆದಿದ್ದ ದರ್ಶನ್‌ನನ್ನು, ಆಗಸ್ಟ್ 29ರಂದು ಕೋರ್ಟ್ ಆದೇಶದ ಮೇರೆಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿಸಲಾಯಿತು. ಹೀಗೆ 140 ದಿನಗಳ ಕಾಲ ಜೈಲುವಾಸ ಅನುಭವಿಸುತ್ತಿದ್ದರು.
ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ದರ್ಶನ್‌ರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಹೈಕೋರ್ಟ್‌ಗೆ ಅರ್ಜಿ ಹಾಕಿ, ಆರೋಗ್ಯ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು.
ದರ್ಶನ್‌ಗೆ ತೀವ್ರ ಬೆನ್ನು ಹುರಿಯಿದ್ದ, ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಒಂದೊಮ್ಮೆ ಚಿಕಿತ್ಸೆ ತಡವಾದರೆ ಅವರು ಪಾರ್ಶ್ವವಾಯುವಿಗೆ ಈಡಾಗುವ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ದರ್ಶನ್ ಕುರಿತು ವರದಿ ನೀಡಲು ಮೆಡಿಕಲ್ ಬೋರ್ಡ್ ಸ್ಥಾಪನೆ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ವಾದ ಪತ್ರಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು ಎಂದು ಉಲ್ಲೇಖಿಸಿ ಷರತ್ತುಬದ್ಧ ಮಧ್ಯಂತ್ರ ಜಾಮೀನು ನೀಡಿದೆ. ಆದರೆ, 6 ವಾರಗಳ ಮಧ್ಯಂತರ ಜಾಮೀನು ಇದಾಗಿದೆ. ಎಸ್‌ಪಿಪಿ ಮನವಿ ಮನವಿ ಮೇರೆಗೆ ದರ್ಶನ್ ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಸೂಚಿಸಿದೆ.
ನ್ಯಾಯಾಲಯದ ಷರತ್ತು ಪೂರ್ಣಗೊಳಿಸಿದ ಬಳಿಕ ದರ್ಶನ್ ಇಂದು ಸಂಜೆಯೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಮದ್ಯಂತರ ಜಾಮೀನಿಂದ ದರ್ಶನ್ ಹಾಗೂ ದಾಸನ ಅಭಿಮಾನಿಗಳಿಗೆ ಇಂದಿನಿಂದಲೇ ದೀಪಾವಳಿ ಆರಂಭವಾಗಿದೆ.