Mysore
27
scattered clouds

Social Media

ಬುಧವಾರ, 15 ಜನವರಿ 2025
Light
Dark

ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಜಾಮೀನು ಅರ್ಜಿ ಇಂದು(ಅ.4) ವಿಚಾರಣೆ ನಡೆದಿದ್ದು, ಸುದೀರ್ಘ ವಾದ ಮಂಡನೆಯ ಬಳಿಕ ನಾಳೆ ಮಧ್ಯಾಹ್ನ 12.30ಕ್ಕೆ 57ನೇ ಸಿಸಿಎಚ್‌ ಕೋರ್ಟ್‌ನಲ್ಲಿ ವಿಚಾರಣೆಯನ್ನು ಮುಂದೂಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಂ.2 ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕಳೆದ ಎರಡೂ ವಾರಗಳಿಂದಲೂ ಕೆಲವು ಕಾರಣಗಳಿಗೆ ಕೋರ್ಟ್‌ ಮುಂದೂಡುತ್ತಲೇ ಇತ್ತು. ಆದರೆ ಇಂದು(ಅ.4) ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ದರ್ಶನ್‌ ಪರ ನ್ಯಾಯಾಲಯದಲ್ಲಿ ನ್ಯಾಯ ಮಂಡಿಸಿ, ದಿನ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂಡೂಡುವಂತೆ ಮಾಡಿದ್ದಾರೆ.

ಎಸ್‌ಪಿಪಿ ಪ್ರಸನ್ನಕುಮಾರ್‌ ಹಾಜರಿಯಲ್ಲಿ ವಾದ ಮಂಡನೆ ಪ್ರಾರಂಭಿಸಿದ ಸಿ.ವಿ.ನಾಗೇಶ್‌, ಈ ಪ್ರಕರಣದಲ್ಲಿ ಎಲ್ಲಾ ಮಾಧ್ಯಮಗಳು ಆರೋಪಿ 2 ದರ್ಶನ್‌ ಅವರನ್ನೇ ಅಪರಾಧಿ ಎಂದೇ ಬಿಂಬಿಸಿವೆ. ಅಲ್ಲದೇ ಎಸ್‌ಪಿಪಿ ಅವರು ಪೊಲೀಸರ ತನಿಖೆಯನ್ನು ಅತ್ಯುತ್ತಮ ತನಿಖೆ ಎಂದಿದ್ದಾರೆ. ಆದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದೊಂದು ಕಳಪೆ ತನಿಖಾ ವರದಿ ಎಂದು ದೂರಿದರು. ಪ್ರಕರಣಕ್ಕೆ ಕುರಿತಂತೆ ವಾದದ ಟಿಪ್ಪಣಿ ಸಲ್ಲಿಸಿದ ನಂತರ ಎರಡು ಸುಪ್ರೀಂಕೋರ್ಟ್‌ನ ಆದೇಶಗಳನ್ನು ಕೂಡ ನ್ಯಾಯಾಲಯದಲ್ಲಿ ವಾದ ಮಾಡುವ ಸಂದರ್ಭದಲ್ಲಿ ಮಂಡಿಸಿದರು.

ದರ್ಶನ್‌ ವಿರುದ್ಧ ತನಿಖಾ ವೇಳೆಯಲ್ಲಿ ಸಾಂದರ್ಭಿಕ, ಪ್ರತ್ಯಕ್ಷ ಸಾಕ್ಷಿಗಳನ್ನು ಹೆಸರಿಸಲಾಗಿದೆ. ಆದರೆ ಆ ಎಲ್ಲಾ ಸಾಕ್ಷಿಗಳು ಸೃಷ್ಠಿಸಿರುವ ಸಾಕ್ಷಿಗಳಾಗಿವೆ. ಜೂನ್‌ 12 ರಿಂದಲೇ ದಾಖಲೆ ಸೃಷ್ಠಿಸುವ ಕಾರ್ಯ ನಡೆದಿದ್ದು, ನೈಲಾನ್‌ ಹಗ್ಗ, ಮರದ ಕೊಂಬೆ ಹಾಗೂ ನೀರಿನ ಬಾಟಲ್‌ ಅನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಈ ಎಲ್ಲಾ ವಸ್ತುಗಳು ಜೂನ್‌ 9 ರಂದೇ ಪೊಲೀಸ್‌ರ ವಶದಲ್ಲಿದ್ದವು ಎಂದು ತನಿಖಾಧಿಕಾರಿಯ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿ ಹೇಳಿಕೆ ಮೇಲೆ ಜೂ.12 ರಂದು ರಿಕವರಿ ಮಾಡಿಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಜೂನ್‌ 12 ರಂದು ಕತ್ತಲೆಯಲ್ಲಿ ಪಂಚನಾಮೆ ರಿಕವರಿ ಮಾಡಿದ್ದು, ಪೊಲೀಸರಿಗೆ ಬೆಳಗ್ಗೆ ಸಿಗದಿದ್ದು ಪಂಚನಾಮೆ ವೇಳೆ ಹೇಗೆ ಸಿಕ್ಕಿತಂತೆ ಎಂದು ಪ್ರಶ್ನಿಸಿದ್ದಾರೆ.

ಆರೋಪಿ ದರ್ಶನ್‌ ಹೇಳಿಕೆಯನ್ನು ಜೂ.11 ರಂದೇ ಹೇಳಿಕೆಯಲ್ಲಿ ದಾಖಲಿಸಲಾಗಿದೆ. ಈ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಕೊಲೆ ಮಾಡಿದ ಸ್ಥಳ ತೋರಿಸುತ್ತೇನೆ ಎಂದಿದೆ. ಆದರೆ ಅದೇ ದಿನ ಪೊಲೀಸರು ಸ್ಥಳಕ್ಕೆ ದರ್ಶನ್‌ ಅನ್ನು ಸ್ಥಳಕ್ಕೆ ಕರೆದೊಯ್ದಿಲ್ಲ. ಜೂ.10 ರಂದು ಆರೋಪಿ ಎ4ನ ಸ್ವಇಚ್ಛಾ ಹೇಳಿಕೆಯಲ್ಲಿ ಸ್ಥಳದ ವಿವರವಿದೆ. ಪಿಎಸ್‌ಐ ವಿನಯ್‌ ಹೇಳಿಕೆಯಲ್ಲಿ ಜೂ.8 ರಂದು ಮಾಹಿತಿ ಇತ್ತೆಂದಿದೆ. ಆರೋಪಿ ಪ್ರದೋಷ್‌ ಜೂ.8 ರ ಮಧ್ಯರಾತ್ರಿ ವಿನಯ್‌ಗೆ ಕರೆ ಮಾಡಿದ್ದ. ಮೂವರು ಹಣದ ವಿಷಯಕ್ಕೆ ಕೊಲೆ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಈ ವಿಷಯವನ್ನು ಸರ್ಕಲ್‌ ಇನ್ಸ್‌ಪೆಕ್ಟರ್‌ಗೆ ತಿಳಿಸಲಾಗಿದೆ. ಬಳಿಕ ಪ್ರತ್ಯಕ್ಷದರ್ಶಿ ಹೇಳಿಕೆ ಪ್ರಕಾರವೇ ಜೂ.9 ರಂದು ಪೊಲೀಸರು ಷೆಡ್‌ಗೆ ಬಂದು ತನಿಖೆಗೆ ಸಂಬಂಧಪಟ್ಟ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ಸಾಕ್ಷಿ ಆಗಿರುವ ವಾಚ್‌ಮ್ಯಾನ್‌ ಹಿಂದಿ ಭಾಷೆಯಲ್ಲಿ ನೀಡಿರುವ 164 ಹೇಳಿಕೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಓದಿದ ನಾಗೇಶ್‌, ಜೂ.9 ರಂದಿ ಪೊಲೀಸರು ಬಂದು ಶೆಡ್‌ನ್ನು ಸೀಜ್‌ ಮಾಡಿದ್ದು, ಮರದಕೊಂಬೆ, ಲಾಠಿ ಹಾಗೂ ನೈಲಾನ್ ಹಗ್ಗ ಎಲ್ಲವನ್ನೂ ವಶಕ್ಕೆ ಪಡೆದಿದ್ದರು. ಆದರೆ ದರ್ಶನ್‌ ಹೇಳಿಕೆ ಪ್ರಕಾರ ಜೂ.12 ರಂದು ವಶಕ್ಕೆ ಎಂದು ಹೇಳಿರುವುದೇಕೆ? ಇದು ಸಾಕ್ಷ್ಯ ತಿರುಚುವಿಕೆ ಅಲ್ಲವೇ? ಸೀಜ್‌ ಮಾಡಿದ ಮೂರು ದಿನ ಪೊಲೀಸರು ಏನು ಮಾಡುತ್ತಿದ್ದರು? ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್‌ ಪ್ರಶ್ನೆ ಮಾಡಿದ್ದಾರೆ. ಬಳಿಕ ವಾದ ಆಲಿಸಿದ ಕೋರ್ಟ್‌ ನಾಳೆ ಶನಿವಾರ (ಅ.5) ಮಧ್ಯಾಹ್ನ 12.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಉಳಿದ ಆರೋಪಿಗಳ ಜಾಮೀನು ಅರ್ಜಿಗಳು ಸಹ ಮುಂದೂಡಿಕೆ ಆಗಿವೆ.

 

Tags: