ಬೆಳಗಾವಿ: ಕೊಲೆ ಬೆದರಿಕೆ ಆರೋಪ ಮಾಡಿ ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಎಂಬುವವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನನಗೆ ಈ ವಿಚಾರ ಗೊತ್ತಾಗಿದ್ದು ಈಗ. ಕಾಂಗ್ರೆಸ್‌ನವರೇ ಇರಲಿ. ನನ್ನ ಆಪ್ತನೇ ಆಗಿರಲ್ಲಿ. ಇದನ್ನು ಇಲ್ಲಿಗೆ ಬಿಡುವ ಮಾತೇ ಇಲ್ಲ. ತನಿಖೆ ಮಾಡಿಸುತ್ತೇನೆ. ನಾನು ಯಾವುದೇ ಮುಚ್ಚುಮರೆ ಮಾಡಲ್ಲ. ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಲಿ ಎಂದು ಗೃಹ ಸಚಿವರಿಗೂ ಮನವಿ ಮಾಡುತ್ತೇನೆ. ತನಿಖೆ ನಡೆದ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ ಎಂದರು.
ಪ್ರಕರಣದ ಹಿನ್ನೆಲೆ: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿ ಬಾಲ್ಕಿ ಮೂಲದ ಗುತ್ತಿಗೆದಾರ ಸಚಿನ್ ಎಂಬುವವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.
ಸಚಿನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತಲೂ ಮುಂಚೆ 7 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಟೆಂಡರ್ ಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ. ಬಳಿಕ ಮತ್ತೆ 1 ಕೋಟಿ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದು, ರಾಜು ಬೆದರಿಕೆ ಹಾಕಿದ್ದಾರೆ. ಹಣ ನೀಡದಿದ್ದರೇ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಚಿನ್ ಗಂಭೀರ ಆರೋಪ ಮಾಡಿದ್ದರು.





