ಹರಿದ್ವಾರ: ದಸರಾ ಆರಂಭಕ್ಕೂ ಮುನ್ನ ಕಾವೇರಿ ಆರತಿ ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮತಿ ಅಧ್ಯಕ್ಷ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಗಂಗಾ ಆರತಿಯ ಬಗ್ಗೆ ಅಧ್ಯಯನ ಪ್ರವಾಸದಲ್ಲಿರುವ ಅವರು, ಹರಿದ್ವಾರದಲ್ಲಿ ಮಾತನಾಡಿ, ತಲಕಾವೇರಿಯಲ್ಲಿ ಹುಟ್ಟುವ ಪವಿತ್ರಾ ಕಾವೇರಿ, ತಮಿಳುನಾಡಿನಲ್ಲಿಯೂ ಹರಿಯುತ್ತೆ. ಕಾವೇರಿ ನಮ್ಮ ಜೀವನದಿಯಾಗಿದೆ. ಹೀಗಾಗಿ ಕಾವೇರಿಗೆ ಗಂಗಾ ಆರತಿ ಮಾಡುತ್ತೇವೆ ಎಂದು ಹೇಳಿದರು.
ಕೆಆರ್‌ಎಸ್ ಗೆ ಬಾಗಿನ ಅರ್ಪಿಸುವಾಗ ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿಗೆ ಗಂಗಾ ಆರತಿ ಸಲ್ಲಿಸಬೇಕು ಎಂದು ಹೇಳಿದ್ದರು. ಅದರಂತೆ ಅಧ್ಯಯನ ಪ್ರವಾಸ ಕೈಗೊಂಡಿದ್ದೇವೆ. ಈ ಬಾರಿಯ ದಸರಾ ವೇಳೆಗೆ ಕಾವೇರಿ ಆರತಿ ಪ್ರಾರಂಭಿಸುತ್ತೇವೆ ಎಂದರು.
ಹಳೆ ಮೈಸೂರು ಭಾಗದ ಎಲ್ಲ ಶಾಸಕರು ಮತ್ತು ಡಿಸಿ ಡಾ.ಕುಮಾರ್ ಸೇರಿದಂತೆ ನಮ್ಮ ನಿಯೋಗ ಇಂದು ಹರಿದ್ವಾರಕ್ಕೆ ಭೇಟಿ ನೀಡಿದೆ. ಹರಿದ್ವಾರದ ಗಂಗಾರತಿ ಪುರಾತನವಾದುದು. ನಾಳೆ ವಾರಣಾಸಿಯಲ್ಲಿ ಗಂಗಾರತಿ ನೋಡಲಿದ್ದೇವೆ ಎಂದರು.
ಎಲ್ಲರೂ ಸೇರಿ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಆದಷ್ಟು ಬೇಗ ಕಾವೇರಿ ಆರತಿ ಮಾಡುವ ಸ್ಥಳ ಗುರುತು ಮಾಡುತ್ತೇವೆ. ಪ್ರಾರಂಭವಾಗುವುದು 4 ದಿನ ತಡವಾಗಬಹುದು. ಆದ್ರೆ ಕಾವೇರಿ ಆರತಿಯನ್ನ ನಿಲ್ಲಿಸಲ್ಲ. ದಸರಾ ವೇಳೆಗೆ ಕಾವೇರಿ ಆರತಿ ಪ್ರಾರಂಭ ಮಾಡಲು ಚಿಂತಿಸಿದ್ದೇವೆ ಎಂದು ತಿಳಿಸಿದರು.
ಬಳಿಕ ಗಂಗಾರತಿ ಸಮಿತಿಯ ಜೊತೆ ಚರ್ಚಿಸಿ ಮಾಹಿತಿ ಪಡೆದರು.