ಹೊಸಪೇಟೆ: ಜಮ್ಮು-ಕಾಶೀರದಲ್ಲಿ ಪಹಲ್ಗಾಮ್ ದಾಳಿಗೂ ಮುನ್ನ ಮೋದಿಯವರಿಗೆ ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೂ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ 26 ಮಂದಿ ಅಮಾಯಕ ಪ್ರವಾಸಿಗರ ಹತ್ಯೆಗೆ ಕಾರಣವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪಹಲ್ಗಾಮ್‍ನಲ್ಲಿ ಪೊಲೀಸರಾಗಲೀ, ಗಡಿ ಭದ್ರತೆಯ ಪಡೆಯಾಗಲೀ ಅಥವಾ ಸೇನೆಯಾಗಲೀ ಪ್ರವಾಸಿಗರಿಗೆ ರಕ್ಷಣೆ ಒದಗಿಸದೇ ಇದ್ದುದ್ದಕ್ಕಾಗಿ 26 ಜೀವಗಳ ಹತ್ಯೆಯಾಗಿದೆ ಎಂದು ಹೇಳಿದರು.
ಏ.17 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜಮ್ಮು-ಕಾಶ್ಮೀರ ಪ್ರವಾಸ ನಿಗದಿಯಾಗಿತ್ತು. ಗುಪ್ತಚರ ಇಲಾಖೆ ಅಲ್ಲಿ ಗಲಾಟೆಯಾಗುತ್ತಿದೆ, ಪ್ರವಾಸವನ್ನು ರದ್ದು ಮಾಡಿ ಎಂದು ಸಲಹೆ ನೀಡಿತ್ತು. ಹೀಗಾಗಿ ಪ್ರವಾಸ ರದ್ದುಗೊಂಡಿತ್ತು. ಇವರಿಗೆ ಮೊದಲೇ ಮುನ್ಸೂಚನೆ ಇದ್ದರೂ ಪ್ರವಾಸಿಗರಿಗೆ ಪೊಲೀಸರ ಮೂಲಕ ಏಕೆ ಎಚ್ಚರಿಕೆ ಕೊಡಲಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.
ಇನ್ನು ದೇಶಕ್ಕೆ ಸ್ವಾತಂತ್ರ್ಯ ಮತ್ತು ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಅದನ್ನು ಉಳಿಸಿಕೊಳ್ಳುವುದು ನಮ ಜವಾಬ್ದಾರಿ ಎಂದರು. ಬಿಜೆಪಿಯವರು ದೇಶರಕ್ಷಣೆಯನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಾರೆ. ದೇಶಕ್ಕಾಗಿ ಸರ್ವಸ್ವವನ್ನೂ ಕಳೆದುಕೊಂಡ ಕಾಂಗ್ರೆಸ್ ಒಂದೆಡೆಯಾದರೆ ದೇಶಕ್ಕಾಗಿ ಏನನ್ನೂ ಮಾಡದ ಬಿಜೆಪಿ ಮತ್ತೊಂದು ಕಡೆ ಇದೆ. ಸೇನೆಯ ವಕ್ತಾರ ಸೋಫಿಯಾ ಖುರೇಷಿಗೆ ಪಾಕಿಸ್ತಾನದ ನಂಟಿದೆ ಎಂದು ಬಿಜೆಪಿಯ ಸಚಿವನೊಬ್ಬ ಹೀಯಾಳಿಸಿದ್ದಾನೆ. ಮೋದಿಯವರು ಮೊದಲು ಬಿಜೆಪಿಯಲ್ಲಿರುವ ದೇಶದ್ರೋಹಿಗಳನ್ನು ಒದ್ದು ಓಡಿಸಿ, ಸಚಿವನ ರಾಜೀನಾಮೆ ಪಡೆದುಕೊಳ್ಳಿ ಎಂದು ಆಗ್ರಹಿಸಿದರು.





