Mysore
26
broken clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಕಾಂಗ್ರೆಸ್ ಮಹಿಳಾ ವಿರೋಧಿ ಅಲ್ಲ, ಬಿಜೆಪಿಯದ್ದು ರಾಜಕೀಯ ಆಟ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ, ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ಮಾಡಿದ ಇತಿಹಾಸ ಕಾಂಗ್ರೆಸ್ ನದ್ದು. ಆದರೆ ಭಾರತೀಯ ಜನತಾ ಪಾರ್ಟಿ ಮಹಿಳಾ ಮೀಸಲಾತಿ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಮಹಿಳಾ ಪ್ರಧಾನಿ (ಇಂದಿರಾ ಗಾಂಧಿ) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ರಾಷ್ಟ್ರಪತಿ (ಪ್ರತಿಭಾ ಪಾಟೀಲ) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ಮುಖ್ಯಮಂತ್ರಿ (ಸುಚೇತಾ ಕೃಪಾಲಿನಿ, 1963 ಉತ್ತರ ಪ್ರದೇಶ) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ಮಂತ್ರಿ (ರಾಜಕುಮಾರಿ ಅಮೃತ ಕೌರ್, 1947) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ MP (ರಾಧಾಬಾಯಿ ಸುಬಾರಾಯನ್, 1952) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ MLA (ಮುತ್ತುಲಕ್ಷ್ಮೀ ರೆಡ್ಡಿ, 1927) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ಪಂಚಾಯತ್ ಅಧ್ಯಕ್ಷೆ ಮಾಡಿದ್ದು ಕಾಂಗ್ರೆಸ್. ಇವೆಲ್ಲವೂ ಕಾಂಗ್ರೆಸ್ ನೀಡಿದ ಅವಕಾಶಗಳೇ. ಇದು ಮಹಿಳಾ ಪರ ನಿಲುವಿನ ಜೀವಂತ ಸಾಕ್ಷಿ. ನಮ್ಮ ಗ್ಯಾರಂಟಿ ಯೋಜನೆಗಳು ಸಹ ಮಹಿಳಾ ಸಬಲೀಕರಣದ ಪರವಾಗಿಯೇ ಇದೆ ಎಂದು ಪ್ರತಿಪಾದಿಸಿದರು.

ಇಂದು ಬಿಜೆಪಿ ನಮ್ಮ ಮೇಲೆ ಮಾಡುತ್ತಿರುವ “ಮಹಿಳಾ ವಿರೋಧಿ” ಎಂಬ ಆರೋಪ ಸಂಪೂರ್ಣ ಸುಳ್ಳು ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇದು ಪೂರ್ವಯೋಜಿತ. ಮಹಿಳಾ ಮೀಸಲಾತಿ ಜೊತೆಗೆ ಕ್ಷೇತ್ರ ವಿಂಗಡಣೆ ವಿಷಯವನ್ನೂ ಜೋಡಿಸಿದ್ದರಿಂದ ಸೋಲಾಯಿತು. ಬಿಜೆಪಿಗೆ ಸೋಲುವುದು ಮೊದಲೇ ಗೊತ್ತಿತ್ತು. ಹಾಗಾಗಿ ಕಾಂಗ್ರೆಸ್ ಮೇಲೆ ಆರೋಪ ಹೊರಿಸಲು ವ್ಯವಸ್ಥಿತಿ ಕುತಂತ್ರ ಮಾಡಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ. ನಾವು ವಿರೋಧಿಸಿದ್ದು ಅದನ್ನು ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿ ಜೊತೆ ಕಟ್ಟಿ ಹಾಕಿದ ವಿಧಾನ. ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದಿದ್ದರೆ, ಅದನ್ನು ಈಗಿನ ಲೋಕಸಭಾ ಸ್ಥಾನಗಳಲ್ಲೇ ತಕ್ಷಣ ಜಾರಿಗೆ ತರಬಹುದಿತ್ತು. 2023ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಪಾಸ್ ಆದಾಗ ಪ್ರಧಾನಿ ಮತ್ತು ಗೃಹ ಸಚಿವರು ಇದೊಂದು ಐತಿಹಾಸಿಕ ಬಿಲ್ ಎಂದು ಹೇಳಿ ಜಾರಿಗೊಳಿಸದಿರುವುದೇಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಉದ್ದೇಶಪೂರ್ವಕವಾಗಿ ಜನಗಣತಿ ಮತ್ತು ಕ್ಷೇತ್ರ ವಿಂಗಡಣೆ ಎಂಬ ಷರತ್ತುಗಳನ್ನು ಸೇರಿಸಿ ಅದನ್ನು ವಿಳಂಬಗೊಳಿಸಿದೆ ಎಂದು ಹೇಳಿದರು.

ಮಹಿಳಾ ಮೀಸಲಾತಿ ರಾಜಕೀಯ ಆಟದ ವಿಷಯವಲ್ಲ; ಅದು ಮಹಿಳೆಯರ ಹಕ್ಕಿನ ಪ್ರಶ್ನೆ. ಕಾಂಗ್ರೆಸ್ ಮಹಿಳೆಯರ ಪರ ನಿಂತಿತ್ತು, ನಿಂತಿದೆ, ಮುಂದೆಯೂ ನಿಂತೇ ಇರುತ್ತದೆ. ಸುಳ್ಳು ಪ್ರಚಾರದಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಆದರೆ ಬಿಜೆಪಿ ಕಾಂಗ್ರೆಸ್ ಮಹಿಳಾ ವಿರೋಧಿ ಎನ್ನುವ ರೀತಿ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಎಲ್ಲರಿಗೂ ಸಮಾನ ಹಕ್ಕು ಎನ್ನುವ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಮೇಲೆ ಸುಮ್ಮನೇ ಗೂಬೆ ಕೂರಿಸಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

 

Tags:
error: Content is protected !!