ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಗರಣಗಳಿಂದಾಗಿ ಕೋಮಾ ಸ್ಥಿತಿಗೆ ಹೋಗಿದ್ದು, ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ, ಅಭಿವೃದ್ಧಿ ಕಾರ್ಯಗಳಿಗೆ ಇಷ್ಟು ತೊಡಕಾಗುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಮಂಗಳವಾರ(ಆ.3) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಅದಕ್ಕೆ ಪ್ರತ್ಯೇಕ ಪರಿಹಾರ ನೀಡಲು ಸರ್ಕಾರ ಮುಂದಾಗಿಲ್ಲ. ಮಳೆಯಿಂದಾಗಿ ಎಲ್ಲ ಕಡೆ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಲ್ಲಿ ಸುಲಲಿತವಾಗಿ ಓಡಾಡುವ ಗ್ಯಾರಂಟಿಯನ್ನು ಸರ್ಕಾರ ನೀಡಬೇಕು. ಹಗರಣಗಳಿಂದಾಗಿ ಸರ್ಕಾರ ಕೋಮಾ ಸ್ಥಿತಿಗೆ ಹೋಗಿದ್ದು, ಎಲ್ಲರೂ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಕಮಿಶನ್ ಆಸೆಗಾಗಿ ಗುತ್ತಿಗೆದಾರರಿಗೆ ಕೊಡಬೇಕಿರುವ 1,500 ಕೋಟಿ ರೂ. ತಡೆಹಿಡಿದಿದ್ದು, ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಇದು ಕಾಸಿಲ್ಲದ ಬ್ರ್ಯಾಂಡ್ ಬೆಂಗಳೂರಾಗಿದೆ ಎಂದು ದೂರಿದರು.
ಕೆಪಿಎಸ್‌ಸಿಯಲ್ಲಿ ಕನ್ನಡ ಭಾಷಾಂತರ ಮಾಡಲು ಕೂಡ ಯೋಗ್ಯತೆ ಇಲ್ಲ. ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಅಂತಹವರ ಆಡಳಿತದಲ್ಲೇ ಕನ್ನಡ ಪ್ರಶ್ನೆಪತ್ರಿಕೆಯನ್ನು ನೀಡಲು ಸಾಧ್ಯವಾಗಿಲ್ಲ. ಮುಡಾ, ವಾಲ್ಮೀಕಿ ನಿಗಮದ ಹಗರಣದ ಒತ್ತಡದಿಂದಾಗಿ ಕೆಪಿಎಸ್‌ಸಿಯಲ್ಲಿ ಪರೀಕ್ಷೆ ನಡೆಸಲು ಕೂಡ ಸಾಧ್ಯವಾಗಿಲ್ಲ. ಪರೀಕ್ಷೆ ರದ್ದು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಕಳೆದ ಬಾರಿ ಪರೀಕ್ಷೆ ಬರೆದವರಿಗೆ ಈ ಬಾರಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಈ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಬಂದ ಬಳಿಕ ಅತ್ಯಾಚಾರ, ಮಹಿಳಾ ದೌರ್ಜನ್ಯ ಹೆಚ್ಚಿದೆ. ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಹಿಂದಿರುವ ಮಾದಕ ದ್ರವ್ಯ ಜಾಲದ ಬಗ್ಗೆ ಕಾರ್ಕಳ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಇದರ ಹಿಂದೆ ದೊಡ್ಡ ಡ್ರಗ್ಸ್‌ಜಾಲವೇ ಇದೆ. ಬಿಜೆಪಿ ಸರ್ಕಾರ ಇದ್ದಾಗ ವಿಶೇಷ ಅಭಿಯಾನ ನಡೆಸಿ ಡ್ರಗ್ಸ್ ನಿಯಂತ್ರಣ ಮಾಡಲಾಗಿತ್ತು. ಈ ಸರ್ಕಾರ ಡ್ರಗ್ಸ್ ದಂಧೆಕೋರರಿಗೆ ಅನುಮತಿ ನೀಡಿದೆ. ಇದರಿಂದಾಗಿ ಯುವತಿ ಮೇಲೆ ಅತ್ಯಾಚಾರವಾಗಿದೆ ಎಂದರು.