ನವದೆಹಲಿ: ಗುಜರಾತ್, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿಯಲ್ಲಿನ ಆಳಸಮುದ್ರ ಗಣಿಗಾರಿಕೆಗೆ ಅನುಮತಿ ನೀಡುವ ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆ ವಿಪಕ್ಷ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.
ಈ ಕುರಿತು ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಮಾಹಿತಿ ನೀಡಿರುವ ಅವರು, ಸ್ಥಳೀಯರೊಂದಿಗೆ ಸಮಾಲೋಚಿಸದೆ, ಪರಿಸರದ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸದೆ ಆಳಸಮುದ್ರದ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ನಾನು ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಕರಾವಳಿ ಸಮುದಾಯಗಳು, ಪರಿಸರದ ಮೇಲಿನ ಪರಿಣಾಮವನ್ನು ನಿರ್ಣಯಿಸದೇ ಗಣಿಗಾರಿಕೆಗೆ ಟೆಂಡರ್ ಆಹ್ವಾನಿಸಿದ್ದರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೇ ಗಣಿಗಾರಿಕೆ ಪರಿಣಾಮಗಳ ಬಗ್ಗೆ ಚಿಂತಿಸದೆ ಖಾಸಗಿ ಕಂಪೆನಿಗಳಿಗೆ ಗಣಿಗಾರಿಕೆ ಮಾಡಲು ಅನುಮತಿಸುವುದು ಕಡಲ ಜೀವಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನು ಲಕ್ಷಾಂತರ ಮೀನುಗಾರರು ತಮ್ಮ ಜೀವನೋಪಾಯ ಮೇಲೆ ಇದರ ಪರಿಣಾಮದ ಕುರಿತು ತೀವ್ರ ಕಳವಳ ವ್ಯಕ್ತವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ತನ್ನ ನಿರ್ಧಾರವನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.





