Mysore
28
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ನಾವು ಸಂವಿಧಾನ ರಕ್ಷಿಸಿದರೆ, ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ನಾವು ಸಂವಿಧಾನ ರಕ್ಷಿಸಿದರೆ, ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ. ನಮಗೆ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಿದ್ಧಾಂತ ಗೆಲ್ಲಬೇಕು. ಅದು ಮಾತ್ರ ನಮ್ಮ ನಿಜವಾದ ಗೆಲುವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು(ಜನವರಿ.21) ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ದ್ವೇಷಿಯಾಗಿರುವ ಆರ್‌ಎಸ್‌ಎಸ್‌
ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದ್ದಾರೆ. ಇದನ್ನು ನಾವು ಸಮಾಜದಲ್ಲಿ ಹಿಮ್ಮೆಟ್ಟಿಸಬೇಕಾಗಿದೆ ಎಂದರು.

ಬಿಜೆಪಿ ಪರಿವಾರ ಭಾರತದಲ್ಲಿ ಬಹಳ ವ್ಯವಸ್ಥಿತವಾಗಿ ಒಡಕು ತರುತ್ತಿದ್ದು, ಭಾರತೀಯರ ನಡುವೆ ಬಿರುಕು ಮೂಡಿಸುತ್ತಾ ಭಾರತವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯ ಈ ಯತ್ನವನ್ನು ನಾವು ಸೋಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮಗೆ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಅವರೇ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಇದನ್ನು ಈ ದೇಶ, ದೇಶದ ಜನ ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ ಮತ್ತು ಮರೆಯುವುದಿಲ್ಲ. ನಮ್ಮ ದೇಶದಲ್ಲಿ ಹಲವು ಭಾಷೆ, ಜಾತಿ ಹಾಗೂ ಧರ್ಮ‌ಗಳಿರುವುದೇ ಭಾರತದ ಶಕ್ತಿಯಾಗಿದೆ. ಹೀಗಿರುವಾಗ ಬಿಜೆಪಿ ಪರಿವಾರ ಗಾಂಧಿ, ಅಂಬೇಡ್ಕರ್‌ ಅವರನ್ನು ದ್ವೇಷಿಸುತ್ತದೆ. ಆದರೆ ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ ಮತ್ತು ವಿಸ್ತರಿಸುತ್ತೇವೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ಆಶಯಗಳು, ಮೌಲ್ಯಗಳ ಈಡೇರಿಕೆಗೆ ನಾವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಇದಕ್ಕಾಗಿ ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂಪಾಯಿಗಳನ್ನು ಅಧಿಕ ಮೊತ್ತದ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕಿ ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ್ದೇವೆ ಎಂದು ಹೇಳಿದರು.

Tags: