ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು(ಡಿಸೆಂಬರ್.20) 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಾಡಿನ ಬಗ್ಗೆ ಕವಿರಾಜಮಾರ್ಗವೆಂಬ ಕನ್ನಡದ ಪ್ರಮುಖ ಕೃತಿಯಲ್ಲಿ ಪ್ರಸ್ತಾಪಿಸಿದ್ದು, ಕಾವೇರಿಯಿಂದ – ಗೋದಾವರಿಯವರೆಗೆ ನಾಡಿನ ಗಡಿ ಹಬ್ಬಿತ್ತೆಂದು ಅದರ ಕೃತಿಕಾರ ರಚಿಸಿದ್ದಾರೆ. ಅಲ್ಲದೇ ಈ ಜಿಲ್ಲೆಯ ಬಗ್ಗೆ ತಿಳಿಯಲು ಕ್ರಿ.ಶ. ೧೦ನೇ ಶತಮಾನದ ಆತಕೂರಿನ ಶಾಸನ ನಾಡಿನ ಹಳೆಯ ಶಾಸನಗಳಲ್ಲೊಂದಾಗಿದೆ. ಇದೊಂದು ಶಾಸನವೂ ನಾಯಿಯೊಂದರ ವೀರ ಮರಣವೂ ಇತಿಹಾಸದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಶಾಸನ ಹಾಗೂ ಅಲ್ಲಿ ಬಳಕೆಯಾದ ಕನ್ನಡವನ್ನು ನಾವು ಮರೆಯಬಾರದು. ಹೀಗಾಗಿ ನಾವೆಲ್ಲರೂ ಮಂಡ್ಯ ಸೀಮೆಯನ್ನು ಸ್ಮರಿಸಿರಲೇಬೇಕು ಎಂದು ಹೇಳಿದ್ದಾರೆ.
ಸಕ್ಕರೆ ಸೀಮೆಯಾದ ಮಂಡ್ಯದ ಈ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಹಾಗೂ ದೇಶ – ವಿದೇಶಗಳಿಂದಲೂ ಸಾಹಿತ್ಯದ ಅಭಿಮಾನಿಗಳು ಬಂದಿದ್ದೀರಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ನಿಜಾರ್ಥದಲ್ಲಿ ಕನ್ನಡದ ಹಬ್ಬವೇ ಆಗಿದೆ. ಕಾವೇರಿ ಕಣಿವೆಯಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತಿವೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಸದಾಕಾಲಕ್ಕೂ ಮೆರೆಸಿರುವ ಈ ಜಿಲ್ಲೆ ಅಪ್ಪಟ ಕನ್ನಡದ ನೆಲವಾಗಿದೆ. ಅಲ್ಲದೇ ಭತ್ತದ ಕಣಜ ಮತ್ತು ಸಕ್ಕರೆ ನಾಡು ಎಂದೇ ಜನಜನಿತವಾಗಿದೆ. ಜಗತ್ತಿನ ಯಾವ ಮೂಲೆಯ ಭಾಷೆಯವರು ಬಂದರೂ ಅವರಿಗೆ ಒಂದೇ ತಿಂಗಳಲ್ಲಿ ಕನ್ನಡವನ್ನು ಕಲಿಸುತ್ತೇವೆ ಎಂಬ ಭಾಷಾಭಿಮಾನ ಹಾಗೂ ದಿಟ್ಟತನ ಮಂಡ್ಯದ ಜನರದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಓದು – ಬರಹ, ಭಾಷೆ, ಬರವಣಿಗೆ ಎಲ್ಲವೂ ಪರಕೀಯವಾದರೆ ನಮ್ಮ ಮಾತೃಭಾಷೆಗೆ ಅಪಾಯ ತಪ್ಪಿದಲ್ಲ. ಯಾವುದೇ ಭಾಷೆಯ ಅಳಿವು ಆ ಭಾಷಾ ಸಮುದಾಯದ ಅಳಿವೂ ಆಗಿರುತ್ತದೆ. ಭಾಷೆ ಬೆಳೆಯುವುದು ಉಳಿಯುವುದು ಅದನ್ನು ಬಳಸಿದಾಗ ಮಾತ್ರ. ಬಳಸದೇ ಹೋದರೆ ಭಾಷೆಯ ಅಸ್ತಿತ್ವ ಹಾಗೂ ಬೆಳವಣಿಗೆ ಎರಡಕ್ಕೂ ಅಪಾಯ ತಪ್ಪಿದ್ದಲ್ಲ. ಕನ್ನಡದ ಕಲೆ, ಜಾನಪದ, ಭಾಷೆ, ಉದ್ಯೋಗದ ಜೊತೆಗೆ ಕನ್ನಡದ ಅಸ್ಮಿತೆಗೆ ಉಂಟಾಗಿರುವ ಸಮಸ್ಯೆಗಳನ್ನು ಗುರುತಿಸಿ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಸಮ್ಮೇಳನವೂ ಆ ದಿಕ್ಕಿನಲ್ಲಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ. ಅವರಿಗೆ ಕನ್ನಡ ಕಲಿಸಿ, ಕನ್ನಡ ಉಳಿಸಿ, ಬೆಳೆಸಬೇಕಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ದಿ.ದೇವರಾಜ ಅರಸು ಅವರ ಅವಧಿಯಲ್ಲಿ 1973ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಇಡೀ ರಾಜ್ಯವನ್ನು ಪ್ರತಿನಿಧಿಸುವ ಹೆಸರಾದ ಕರ್ನಾಟಕವೆಂದು ಮರುನಾಮಕರಣ ಮಾಡಿದರು. ಈ ನಾಡಿಗೆ ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷಗಳು ತುಂಬಿದ ನೆನಪಿಗಾಗಿ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಬೇಕೆಂದು ನಮ್ಮ ಸರ್ಕಾರ ನಿರ್ಧರಿಸಿ, ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಪ್ರಚುರಪಡಿಸಲು ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎ೦ಬ ಘೋಷವಾಕ್ಯದಡಿ ಇಡೀ ವರ್ಷ ವಿಶೇಷ ಕಾರ್ಯಕ್ರಮಗಳ ಮೂಲಕ ಕನ್ನಡವನ್ನು ಸಂಭ್ರಮಿಸಲಾಗಿದೆ. ಸುವರ್ಣ ಸಂಭ್ರಮ ಕಾರ್ಯಕ್ರಮದ ಜ್ಯೋತಿ ರಥದ ಉದ್ಘಾಟನೆಯನ್ನು ಹಂಪಿಯಲ್ಲಿ ಮಾಡಲಾಯಿತು. ಸಮಾರೋಪವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನೇಶ್ವರಿ ದೇವಸ್ಥಾನದಲ್ಲಿ ಮಾಡಲಾಯಿತು ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಸಾಹಿತ್ಯ – ಸಂಸ್ಕೃತಿಗಳ ಪರಂಪರೆ ಬಹಳ ಉತ್ಕೃಷ್ಟವಾದುದು. ಕನ್ನಡ ನಾಡಿಗೆ ಗೋವಿನ ಹಾಡು ಎಂಬ ಶ್ರೇಷ್ಠ ಸಾಹಿತ್ಯವನ್ನು ಕೊಟ್ಟನೆಲವಿದು. ನಾಡಿನ ಸಂಸ್ಕೃತಿಯ ಆರೋಗ್ಯಕ್ಕಾಗಿ ಶ್ರಮಿಸಿದ ಈ ಭಾಗದ ಎಲ್ಲ ಮಹನೀಯರನ್ನೂ ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು. ಮನೆಯ ಒಡವೆಗಳನ್ನು ಮಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟೆಯನ್ನು ಕಟ್ಟಿಸಿದರು. ಈ ಅಣೆಕಟ್ಟನ್ನು ಕಟ್ಟಿಸುವಾಗ ಟಿಪ್ಪು ಸುಲ್ತಾನನನ್ನು ಸಹ ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಆಧುನಿಕ ಮಂಡ್ಯದ ನಿರ್ಮಾಣದಲ್ಲಿ ಮೈಸೂರಿನ ಅರಸರು, ಶ್ರೀರಂಗಪಟ್ಟಣದ ಹೈದರ್ ಮತ್ತು ಟಿಪ್ಪು ಮುಂತಾದವರನ್ನು ಮರೆಯುವಂತೆಯೇ ಇಲ್ಲ. ಹಾಗೆಯೇ ಮಂಡ್ಯದ ಸ್ಫೂರ್ತಿಯಾದ ಎಚ್.ಕೆ.ವೀರಣ್ಣಗೌಡರು, ಕೆ.ವಿ.ಶಂಕರೇಗೌಡರು, ಎಸ್.ಸಿ.ಮಲ್ಲಯ್ಯ, ಜಿ.ಮಾದೇಗೌಡರು, ಎಂ.ಸಿ.ಬಂದೀಗೌಡರು, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಇತ್ತೀಚೆಗೆ ನಿಧನರಾದ ಎಸ್.ಎಂ.ಕೃಷ್ಣ ಮುಂತಾದವರನ್ನು ಮರೆಯಬಾರದು ಎಂದಿದ್ದಾರೆ.
ಮೂರು ದಶಕಗಳ ಹಿಂದೆ ಅಂದರೆ 1994ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಹಿತಿ ಚದುರಂಗ ಅವರ ಅಧ್ಯಕ್ಷತೆಯಲ್ಲಿ 63ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆದರೆ 30 ವರ್ಷಗಳ ನಂತರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪನವರು ಸಮ್ಮೇಳನದ ಅಧ್ಯಕ್ಷರಾಗಿರುವುದು ಕನ್ನಡದ ಗೌರವ ಹೆಚ್ಚಿಸಿದೆ. ಗಾಂಧಿ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದ ಗೊ.ರು.ಚನ್ನಬಸಪ್ಪ ಅವರು ಭೂ ದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತ್‌ಸೌಟ್ಸ್ ಮತ್ತು ಗೈಡ್ಸ್‌ನ ಕೇಂದ್ರ ಕಚೇರಿಯಲ್ಲಿ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಜಾನಪದ ಜಗತ್ತು ಪಂಚಾಯತ್ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಮೊದಲಾದ ಪತ್ರಿಕೆಗಳಿಗೆ ಸ೦ಪಾದಕರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನವನ್ನು ತರೀಕೆರೆಯಲ್ಲಿ ನಡೆಸಿದ ಕೀರ್ತಿಯೂ ಸಹ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.