Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಬೆಂಗಳೂರು ಕಂಬಳಕ್ಕೆ 1 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಲಾಗಿದ್ದು, ಈ ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ ಅವರು 1 ಕೋಟಿ ಅನುದಾನ ಘೋಷಿಸಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ ಪ್ರಕಾಶ್‌ ಶೆಟ್ಟಿ ತಿಳಿಸಿದ್ದಾರೆ.

ಬೆಂಗಳೂರು ಕಂಬಳ ತಯಾರಿ ಸಲುವಾಗಿ ಬೆಂಗಳೂರಿನ ಬಂಟರ ಸಂಘದಲ್ಲಿ ಕರಾವಳಿಯ ವಿವಿಧ ಜಾತಿ ಭಾಷಾ ಸಂಘಟನೆಗಳ ಜೊತೆ ನಡೆದ ಬೃಹತ್ ಸಮಾಲೋಚನಾ ಸಭೆ ಬಳಿಕ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕರಾವಳಿಯ ಎಲ್ಲಾ ಸಮುದಾಯದವರು ಒಟ್ಟಾಗಿ ಸೇರುವ ಬೃಯತ್‌ ವೇದಿಕೆ ಇದಾಗಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಕಂಬಳ ಸಂಬಂಧ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ರಾಜಧಾನಿಯಲ್ಲಿ ಮೊದಲ ಬಾರಿಗೆ ಕಂಬಳ ನಡೆಯುತ್ತಿದ್ದು, ಸುಮಾರು 3 ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಅರಮನೆ ಮೈದಾನದಲ್ಲಿ ಸುಮಾರು 70 ಎಕರೆ ಜಾಗದಲ್ಲಿ ಕಂಬಳ ನಡೆಯಲಿದೆ ಎಂದರು.

ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿದ್ದು, ಆ ಎಲ್ಲಾ ಕೋಣಗಳನ್ನು ನ.23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿಕೊಡಲಾಗುವುದು. ಅಷ್ಟೂ ಕೋಣಗಳನ್ನು ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದು. ಅಲ್ಲದೆ, ಪ್ರತಿ ತಾಲೂಕಲ್ಲೂ ಸ್ವಾಗತ-ಬೀಳ್ಕೊಡುಗೆ ಇರಲಿದೆ ಎಂದರು.

ಸಮಿತಿ ಸಂಘಟನಾ ಅಧ್ಯಕ್ಷ ಉಮೇಶ್ ಶೆಟ್ಟಿ ಅವರು ಮಾತನಾಡಿ, ಬೆಂಗಳೂರು ಕಂಬಳಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾತಾರೆಯರು ಆಗಮಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಥೀಮ್ ಸಾಂಗ್ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಥೀಮ್ ಸಾಂಗ್‌ ವಿ.ಮನೋಹರ್ ಸಾಹಿತ್ಯ, ಗುರುಕಿರಣ್ ಸಂಗೀತ ಸಂಯೋಜನೆ, ಮಣಿಕಾಂತ್ ಕದ್ರಿ ಪ್ರೋಗ್ರಾಮಿಂಗ್‌ನಲ್ಲಿ ಮೂಡಿ ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ