Mysore
21
mist

Social Media

ಗುರುವಾರ, 11 ಡಿಸೆಂಬರ್ 2025
Light
Dark

ಶುದ್ಧ ಇಂಧನಕ್ಕೆ ಒತ್ತು: ಆಸ್ಟ್ರೇಲಿಯಾದ ಸ್ಮಾರ್ಟ್ ಎನರ್ಜಿ ಕೌನ್ಸಿಲ್‌ ಜತೆ ಇಂಧನ ಇಲಾಖೆ ಒಪ್ಪಂದ

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಶುದ್ಧ ಇಂಧನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು (ಕ್ರೆಡಲ್) ಆಸ್ಟ್ರೇಲಿಯಾದ ಸ್ಮಾರ್ಟ್ ಎನರ್ಜಿ ಕೌನ್ಸಿಲ್‌ ಜತೆಗಿನ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.

ಈ ಒಪ್ಪಂದವು ಶುದ್ಧ ಇಂಧನ, ನವೀಕರಿಸಬಹುದಾದ ಇಂಧನ, ಗ್ರೀನ್‌ ಹೈಡ್ರೋಜನ್‌, ಬ್ಯಾಟರಿ ಪವರ್‌ ಸ್ಟೋರೇಜ್‌ ವ್ಯವಸ್ಥೆಗಳು ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರ ಹೆಚ್ಚಿಸುವ ಗುರಿ ಹೊಂದಿದೆ. ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರುವ ಒಪ್ಪಂದವನ್ನು ಪರಸ್ಪರ ಒಪ್ಪಿಗೆ ಮೇರೆಗೆ ವಿಸ್ತರಿಸಲು ಅವಕಾಶವಿದೆ.

ರಾಜ್ಯ ಇಂಧನ ಇಲಾಖೆಯ ಪ್ರತಿನಿಧಿಯಾಗಿ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಗೂ ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಪರವಾಗಿ ಅದರ ಮುಖ್ಯ ಕಾರ್ಯನಿರ್ವಾಹಕ ಜಾನ್ ಗ್ರಿಮ್ಸ್ ಮತ್ತು ಒಪ್ಪಂದಕ್ಕೆ ಸಹಿ ಹಾಕಿದರು.

“ಶುದ್ಧ ಇಂಧನ, ಗ್ರೀನ್ ಹೈಡ್ರೋಜನ್, ಬ್ಯಾಟರಿ ಪವರ್‌ ಸ್ಟೋರೇಜ್‌ ಮತ್ತು ಸಂಬಂಧಿತ ವಲಯಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಲು ಆಸ್ಟ್ರೇಲಿಯಾದ ಸ್ಮಾರ್ಟ್ ಎನರ್ಜಿ ಕೌನ್ಸಿಲ್‌ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ನೂತನ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಪಾಲುದಾರಿಕೆಯನ್ನು ಸುಲಲಿತಗೊಳಿಸುವ ಜತೆಗೆ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವುದು ಈ ಒಪ್ಪಂದದ ಗುರಿಯಾಗಿದೆ,” ಎಂದು ಕೆ.ಪಿ. ರುದ್ರಪ್ಪಯ್ಯ ಹೇಳಿದರು.

ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, “ಶುದ್ಧ ಇಂಧನಕ್ಕೆ ಒತ್ತು ನೀಡುವ ಈ ಒಪ್ಪಂದ ಗಮನಾರ್ಹವಾದುದು. ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್‌ ಹೈಡ್ರೋಜನ್‌ಗೆ ಸಂಬಂಧಿಸಿದ ಆಸ್ಟ್ರೇಲಿಯದ ತಂತ್ರಜ್ಞಾನಗಳ ಬಳಕೆ ಕುರಿತು ಸ್ಮಾರ್ಟ್ ಎನರ್ಜಿ ಕೌನ್ಸಿಲ್‌ ಜತೆಗೆ ಕ್ರೆಡಲ್‌ ಸಮಾಲೋಚನೆ ನಡೆಸಲಿದೆ. ಈ ಪಾಲುದಾರಿಕೆಯು ತಂತ್ರಜ್ಞಾನ ವಿನಿಮಯವನ್ನು ಸುಗಮಗೊಳಿಸುವುದಲ್ಲದೇ, ಈ ವಲಯಗಳಲ್ಲಿ ಪರಸ್ಪರ ಹಿತಾಸಕ್ತಿಯನ್ನು ಬೆಂಬಲಿಸುವ ದ್ವಿಪಕ್ಷೀಯ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಿದೆ,” ಎಂದು ತಿಳಿಸಿದರು.

ಸಭೆಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ, ಶಾಸಕರೂ ಆದ ಕ್ರೆಡಲ್‌ ಅಧ್ಯಕ್ಷ ಟಿ.ಡಿ. ರಾಜೇಗೌಡ, ಕ್ರೆಡಲ್‌ ಅಧ್ಯಕ್ಷ ಕೆ.ಪಿ. ರುದ್ರಪ್ಪಯ್ಯ, ಇಂಧನ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್‌, ಸ್ಮಾರ್ಟ್ ಎನರ್ಜಿ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಾಹಕ ಜಾನ್ ಗ್ರಿಮ್ಸ್ ಉಪಸ್ಥಿತರಿದ್ದರು.

ಕೋಟ್‌:
“ಶುದ್ಧ ಇಂಧನ ಮತ್ತು ಹಸಿರು ಹೈಡ್ರೋಜನ್ ಉಪಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ಕಂಪನಿಗಳ ಜತೆಗಿನ ಕರ್ನಾಟಕದ ಸಂಪರ್ಕ ಸಲಭವಾಗುವ ಜತೆಗೆ ಹೂಡಿಕೆ ಅವಕಾಶಗಳು ಹೆಚ್ಚಲಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಉತ್ತೇಜನದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದು, ರಾಜ್ಯದ ಕೈಗಾರಿಕಾ ನೀತಿಗೆ ಅನುಗುಣವಾಗಿ ಯೋಜನೆಗಳಿಗೆ ಪ್ರೋತ್ಸಾಹಕಗಳನ್ನು ಒದಗಿಸಿದ್ದೇವೆ. ಈ ಕ್ರಮಗಳಿಂದಾಗಿ ಕರ್ನಾಟಕವು ಹೂಡಿಕೆಗೆ ಆದ್ಯತೆಯ ತಾಣವಾಗಿದೆ,”
ಕೆ.ಜೆ.ಜಾರ್ಜ್‌, ಇಂಧನ ಸಚಿವರು

Tags:
error: Content is protected !!