ರಾಮನಗರ: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಟಿಕೆಟ್ ಕಗ್ಗಂಟು ಮುಂದುವರಿದಿದ್ದು, ಟಿಕೆಟ್‌ಗಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹರಸಾಹಸ ಮಾಡುತ್ತಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು, ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ರಾಜ್ಯ ಬಿಜೆಪಿ ನಾಯಕರು ಜವಾಬ್ದಾರಿ ತೆಗೆದುಕೊಂಡು ಈ ಚುನಾವಣೆ ನಡೆಸಬೇಕು. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೊಣೆಗಾರಿಕೆ ಇದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು. ಮುಂದಿನ ವಾರ ಎಲ್ಲಾ ಗೊಂದಲಕ್ಕೂ ತೆರೆ ಬೀಳಲಿದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನಗೆ ಟಿಕೆಟ್ ಕೊಡುವ ಮಾತು ಕೊಟ್ಟಿದ್ದಾರೆ. ಆದರೆ ಇದು ಕುಮಾರಸ್ವಾಮಿ ಅವರ ಕ್ಷೇತ್ರ. ಹಾಗಾಗಿ ವರಿಷ್ಠರ ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ನಾನು ಈ ಚುನಾವಣೆಗೆ ಸ್ಪರ್ಧೆ ಮಾಡೇ ಮಾಡುತ್ತೇನೆ. ನನ್ನ ಮೊದಲ ಆದ್ಯತೆ ಮಾತೃಪಕ್ಷ ಬಿಜೆಪಿಗೆ ಇರಲಿದೆ. ಇಲ್ಲವಾದರೆ ಮುಂದಿನ ಯೋಚನೆ ಮಾಡುತ್ತೇನೆ ಎಂದರು.