ಬೆಂಗಳೂರು: ಚಂದನವನದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಜೂನ್ 7 ರಂದು ಕಾನೂನಾತ್ಮಕವಾಗಿ ಡಿವೋರ್ಸ್ ಪಡೆದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಡಿವೋರ್ಸ್ ಬಗ್ಗೆ ಹಲವು ವದಂತಿಗಳು, ಊಹಾಪೋಹಗಳು ಹರಿದಾಡಿದ್ದವು. ಈ ಬಗ್ಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಇಂದು(ಜೂ.10) ಜಂಟಿ ಸುದ್ದಿಗೋಷ್ಠಿ ನಡೆಸಿ ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದನ್ ಶೆಟ್ಟಿ, ನಮ್ಮ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೇ ಡಿವೋರ್ಸ್ ಪಡೆದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಬೇಡದ ಸುಳ್ಳು ಸುದ್ದಿಗಳನ್ನು ಕೆಲವರು ಸೃಷ್ಟಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಲು ಮಾಧ್ಯಮದ ಮುಂದೆ ಬಂದಿದ್ದೇವೆ. ನನ್ನ ಆಲೋಚನೆ, ಜೀವನ ಶೈಲಿ ಹಾಗೂ ನಿವೇದಿತಾ ಅವರ ಜೀವನ ಶೈಲಿ ಬೇರೆ ಇತ್ತು. ಜೀವನದ ಬಗ್ಗೆ ನಾವಿಬ್ಬರು ಬೇರೆಯದ್ದೇ ದಾರಿಯಲ್ಲಿದ್ದೇವೆ. ಅದು ಹೊಂದಾಣಿಕೆ ಆಗಲಿಲ್ಲ. ಹೊಂದಿಕೊಳ್ಳಲು ಪ್ರಯತ್ನಿಸಿದ್ದರು ಹೊಂದಾಣಿಕೆ ಆಗಲಿಲ್ಲ. ಪದೇ ಪದೇ ಮನಸ್ತಾಪ ಆದಾಗ ಒಟ್ಟಿಗೇ ಇರೋದು ಸರಿಯಲ್ಲ ಎಂದು ಒಮ್ಮತದಿಂದ ಡಿವೋರ್ಸ್ ನಿರ್ಧಾರಕ್ಕೆ ಬಂದೆವು ಎಂದು ಚೆಂದನ್ ಶೆಟ್ಟಿ ಹೇಳಿದರು. ಈ ಮಾತಿಗೆ ನಿವೇದಿತಾ ಗೌಡ ಅವರು ಕೂಡ ದನಿಗೂಡಿಸಿದರು.
ಮುಖ್ಯವಾಗಿ ಮೂರು ವದಂತಿಗಳು ನಮಗೆ ಬೇಸರ ತರಿಸಿವೆ. ಮೊದಲಿಗೆ ನಿವೇದಿತಾ ಗೌಡ ಹೆಸರಿನೊಂದಿಗೆ ಇನ್ನೊಬ್ಬರ ಹೆಸರು ತಳುಕು ಹಾಕಿಕೊಂಡಿರುವುದ ಬಹಳ ಬೇಸರವಾಯಿತು. ಆ ವ್ಯಕ್ತಿ ಮನೆಗೆ ನಾನು ಸಾಕಷ್ಟು ಬಾರಿ ಹೋಗಿದ್ದೇನೆ. ಅವರ ಕುಟುಂಬದ ಕಾರ್ಯಕ್ರಮಗಳಿಗೆ ಹೋಗಿದ್ದೇವೆ. ಅವರ ಕುಟುಂಬದೊಂದಿಗೆ ಬೆರೆಯುವುದು ಸಂತೋಷದ ವಿಷಯ. ಆದರೆ ಆ ವ್ಯಕ್ತಿ ಜೊತೆ ನಿವೇದಿತಾಗೆ ಸಂಬಂಧ ಇದೆ ಎಂದು ಹೇಳುವ ವಿಕೃತ ಮನಸ್ಥಿತಿ ನಮ್ಮ ಕನ್ನಡಿಗರಾದ್ದಾಗಿರಬಾರದು ಎಂದು ಚಂದನ್ ಶೆಟ್ಟಿ ನೊಂದುಕೊಂಡು ಮಾತನಾಡಿದರು.
ನಿವೇದಿತಾ ಡಿವೋರ್ಸ್ ಬಳಿಕ ಜೀವನಾಂಶ ಕೇಳಿದ್ದಾರೆ ಎನ್ನುವುದು ಸುಳ್ಳು, ಅವರು ಯಾವುದೇ ಜೀವನಾಂಶ ಕೇಳಿಲ್ಲ, ನಾನು ಕೊಟ್ಟಿಲ್ಲ. ಇನ್ನೂ ನಾವಿಬ್ಬರು ಮಗು ಮಾಡಿಕೊಳ್ಳುವ ವಿಚಾರಕ್ಕೆ ಡಿವೋರ್ಸ್ ಪಡೆದೆವು ಎನ್ನುವ ವದಂತಿ ಇದೆ. ಇದು ಕೂಡ ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ನಿವೇದಿತಾ ಗೌಡ ಮಾತನಾಡಿ, ಆ ರೀತಿಯ ಪೋಸ್ಟ್‌ಗಳನ್ನು ನೋಡಿ, ನನಗೆ ಬೇಸರವಾಯಿತು. ನಾವು ಫ್ಯಾಮಿಲಿ ಫ್ರೆಂಡ್ಸ್, ನಮ್ಮ ಕುಟುಂಬ ಹಾಗೂ ಅವರ ಕುಟುಂಬದ ನಡುವೆ ಉತ್ತಮ ಒಡನಾಟವಿದೆ. ಆದರೆ ಯಾಕೆ ಈ ರೀತಿಯ ಪೋಸ್ಟ್ ಹರಿದಾಡುತ್ತಿವೆ ಎಂದು ತಿಳಿಯುತ್ತಿಲ್ಲ. ಅವರಿಗೂ ಫ್ಯಾಮಿಲಿ, ಮಕ್ಕಳು ಇದ್ದಾರೆ. ಬೇಸರ ಮಾಡಬೇಡಿ, ಅದು ಎಲ್ಲರಿಗೂ ಬಹಳ ನೋವಾಗುತ್ತೆ ಎಂದರು.





