Mysore
21
overcast clouds
Light
Dark

ಚಾಮುಂಡಿ ಪ್ರಾಧಿಕಾರದ ಸಭೆ ನ್ಯಾಯಾಂಗ ನಿಂದನೆಯಲ್ಲ: ಎಚ್.ಕೆ ಪಾಟೀಲ

ಬೆಂಗಳೂರು: ಚಾಮುಂಡಿ ಪ್ರಾಧಿಕಾರದ ಸಭೆ ನಡೆಸಿರುವುದು ನ್ಯಾಯಾಂಗ ನಿಂದನೆಯಲ್ಲ. ಸಭೆ ನಡೆದ ಸಂದರ್ಭದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲವೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ಇಂದಿಲ್ಲಿ ತಿಳಿಸಿದರು.

ಸಚಿವ ಸಂಪುಟದ ನಿರ್ಣಯಗಳನ್ನು ವಿವರಿಸಿದ ಸಚಿವರು  ಪ್ರಮೋದಾ ದೇವಿ ಒಡೆಯರ್ ರವರು ತಡೆಯಾಜ್ಞೆ ಇದ್ದರೂ ಪ್ರಾಧಿಕಾರದ ಸಭೆ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿರುವ ಆರೋಪ ಸರಿಯಲ್ಲ. ಇಂದು ಈ ರಿಟ್ ಅರ್ಜಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಸಭೆ ನಡೆದ ದಿನಾಂಕದಂದು ಯಾವುದೇ ತಡೆಯಾಜ್ಞೆ ಇರಲಿಲ್ಲವೆಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್  ಎನ್. ದೇವದಾಸ ರವರು ಪತ್ರ ಮುಖೇನ ತಿಳಿಸಿರುವುದನ್ನು ತಾವು ಸಚಿವ ಸಂಪುಟದ ಸಭೆಯ ಗಮನಕ್ಕೆ ತಂದಿರುವುದಾಗಿ ಸಚಿವರು ವಿವರಿಸಿದರು.

ಚಾಮುಂಡಿ ಪ್ರಾಧಿಕಾರದ ಕಾನೂನು ಅಸ್ತಿತ್ವದಲ್ಲಿದ್ದು, ಈ ಕಾನೂನಿನ ಕಲಂಗಳನ್ನು ಜಾರಿಗೆ ತರಲು ಅಥವಾ ಅನುಷ್ಠಾನಗೊಳಿಸಲು ಯಾವುದೇ ನ್ಯಾಯಾಂಗದ ಅಡ್ಡಿಗಳಿಲ್ಲವೆಂದು ಅಡ್ವೋಕೇಟ್ ಜನರಲ್ ಕಛೇರಿಯಿಂದ ತಮಗೆ ಪತ್ರ ಕಳುಹಿಸಲಾಗಿದೆ ಎಂದು ಸಚಿವರು ವಿವರಿಸಿದರು.