Mysore
30
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಡಿಕೆಶಿ ವಿದೇಶದಲ್ಲಿ ಶೋಕ ಕಾಣಲು ಹೋಗಿರಬೇಕು: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಬಹುಶಃ ಅವರಿಗೆ ನಮ್ಮ ರಾಜ್ಯವನ್ನು ಬಿಟ್ಟು ಹೊಸ ಲೋಕದಲ್ಲಿ ಶೋಕ ಕಾಣಬಹುದು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಇಂದು(ಡಿಸೆಂಬರ್‌.31) ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪಿಎಂ ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಳು ದಿನ ಶೋಕಾಚರಣೆ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಶೋಕಾಚರಣೆಯನ್ನು ವಿದೇಶದಲ್ಲೇ ಮಾಡಲೆಂದು ಅಲ್ಲಿಗೆ ತೆರಳಿರಬೇಕು. ನಮ್ಮ ರಾಜ್ಯದಲ್ಲೂ ಸಹ ಶೋಕಾಚರಣೆ ಮಾಡಬಹುದು. ಆದರೆ ಡಿಕೆಶಿ ಅವರಿಗೆ ಇಲ್ಲಿ ಶೋಕ ಕಾಣುತ್ತಿಲ್ಲ ಅನ್ನಿಸಿರಬಹುದು. ಅದಕ್ಕಾಗಿ ಹೊಸ ಲೋಕದಲ್ಲಿ ಶೋಕ ಕಾಣಲು ಹೋಗಿರಬಹುದು ಎಂದು ಟೀಕಿಸಿದ್ದಾರೆ.

ಇನ್ನೊಂದು ಕಡೆ ಕೇಂದ್ರ ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಕೂಡ ವಿದೇಶಕ್ಕೆ ಹೋಗಿದ್ದಾರೆ. ಅವರಿಗೆ ಒಂಟಿತನ ಕಾಡುತ್ತಿರಬಹುದು ಆದ್ದರಿಂದಲೇ ವಿದೇಶಕ್ಕೆ ಹೋಗಿರಬಹುದು. ಆದರೆ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಏಕೆಂದರೆ ಅವರು ಮೊದಲಿನಿಂದಲೂ ವಿದೇಶಕ್ಕೆ ತೆರಳುತ್ತಿರುತ್ತಾರೆ ಎಂದಿದ್ದಾರೆ.

ಇದೇ ವೇಳೆ ಸಚಿನ್‌ ಪಾಂಚಾಳ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಚಿನ್‌ ಕುಟುಂಬದವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಸಿಬಿಐಗೆ ವಹಿಸದಿದ್ದರೆ ನ್ಯಾಯ ಸಿಗಲ್ಲ ಎಂದು ಹೇಳುತ್ತಾರೆ. ಆದರೆ ಸಚಿವ ಪ್ರಿಯಾಂಕ್‌ ಖರ್ಗೆ ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡು ನಮಗೆ ಸವಾಲ್‌ ಹಾಕಿದ್ದಾರೆ. ಪ್ರಿಯಾಂಕ್‌ ಅವರ ಸ್ನೇಹಿತರೆ ಈ ಆತ್ಮಹತ್ಯೆಗೆ ಕಾರಣ ಎಂದು ಅವರಿಗೂ ಗೊತ್ತು ಈ ಪ್ರಕರಣದಲ್ಲಿ ಸ್ವಪ್ರತಿಷ್ಠೆ ಬಿಡಬೇಕು ಎಂದು ಕಿಡಿಕಾರಿದ್ದಾರೆ.

ನಾವು ಪ್ರಿಯಾಂಕ್‌ ಅವರನ್ನು ಟಾರ್ಗೆಟ್‌ ಮಾಡುತ್ತಿಲ್ಲ. ಆರೋಪ ಬಂದಾಗ ಯಾವ ರೀತಿ ಎದುರಿಸಬೇಕು ಆ ರೀತಿ ಎದುರಿಸಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ರಾಜೀನಾಮೆ ತೀರ್ಮಾನ ನಿಮ್ಮದ್ದು, ಹೋರಾಟ ನಮ್ಮದು ಎಂದು ತಿರುಗೇಟು ನೀಡಿದ್ದಾರೆ.

 

Tags: