ಬೆಂಗಳೂರು: ಕರ್ನಾಟಕದವರೇ ಆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ರಾಜ್ಯಕ್ಕೆ ಚೊಂಬು ನೀಡಿದ್ದಾರೆ ಎಂದು ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೇಂದ್ರ ಬಜೆಟ್ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಮಾತ್ರ ವಿಶೇಷ ಅನುದಾನ ನೀಡಿದ್ದಾರೆ. ಈ ಬಜೆಟ್‌ನಲ್ಲಿ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ಎಂಎಸ್‌ಪಿ ಕಾಯ್ದೆ ಬಗ್ಗೆ ಬಜೆಟ್‌ನಲ್ಲಿ ಚಕಾರವನ್ನೇ ಎತ್ತಿಲ್ಲ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿಗಳ ಕುರ್ಚಿ ಉಳಿಸೋಕೆ ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಈ ಮೂಲಕ ರಾಜ್ಯದ ನಿರೀಕ್ಷೆಯನ್ನು ಹುಸಿ ಮಾಡಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ಗಂಭೀರ ಆರೋಪ ಮಾಡಿದರು.
ಐದು ಜನ ಕೇಂದ್ರ ಸಚಿವರು ರಾಜ್ಯದವರೇ ಆಗಿದ್ದಾರೆ. ಆದರೂ ಈ ಐದು ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಈ ಬಜೆಟ್‌ನಿಂದ ರಾಜ್ಯಕ್ಕೆ ಸಂಪೂರ್ಣ ಏನೂ ಉಪಯೋಗವಾಗಿಲ್ಲ. ರೈತರಿಗಂತೂ ಈ ಬಜೆಟ್‌ನಿಂದ ಭಾರೀ ಅನ್ಯಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.