ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ಈ ಸಾಧನೆ ಸಾಧ್ಯ: ಸಿಎಂ
ಧಾರವಾಡ :ಬ್ಯಾಂಕೊಂದು ಶತಮಾನೋತ್ಸವ ಆಚರಿಸುವುದು ಸವಾಲಿನ ಸಾಧನೆ. ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ಈ ಸಾಧನೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಧಾರವಾಡದ ರೆಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ” ಎನ್ನುವ ಸಹಕಾರ ತತ್ವದ ಅಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದಲೇ ಬ್ಯಾಂಕ್ ಯಶಸ್ವೀ ಶತಮಾನೋತ್ಸವ ಆಚರಿಸಲು ಸಾಧ್ಯವಾಗಿದೆ.
ರೆಡ್ಡಿ ಸಮುದಾಯದವರು ಮೂಲತಃ ಕೃಷಿಕರು. ರೆಡ್ಡಿ ಬ್ಯಾಂಕ್ ಗೂ ಕೂಡ ರೈತರೇ ಮೂಲ. ಏಷ್ಯಾದಲ್ಲೇ ಮೊದಲು ಸಹಕಾರ ಚಳವಳಿಗೆ ಕರ್ನಾಟಕ ಸಾಕ್ಷಿ ಆಗಿರುವ ಚರಿತ್ರೆ ಇದೆ. ನಮ್ಮ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಅಗತ್ಯವಾದ ಆರ್ಥಿಕ ಸಹಕಾರ ನೀಡಲು ಸಿದ್ದವಿದೆ ಎಂದು ಭರವಸೆ ನೀಡಿದರು.
ರೆಡ್ಡಿ ಬ್ಯಾಂಕ್ ಇನ್ನಷ್ಟು ಯಶಸ್ಸು ಕಂಡು ದೀರ್ಘ ಕಾಲ ರೈತರಿಗೆ ನೆರವಾಗಲಿ. ದೇಶದಲ್ಲಿ ಅಸಮಾನತೆ ಇದೆ. ರೈತರು ಸಂಕಷ್ಟದಲ್ಲಿದೆ. ಸಹಕಾರ ಕ್ಷೇತ್ರ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆ ಎಂದು ಹಾರೈಸಿದರು.
ಮಹಾಯೋಗಿ ವೇಮನ ಸಂಸ್ಥಾನ ಮಠದ ಶ್ರೀ ವೇಮನಾನಂದ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಡಾ.ಮ.ನಿ.ಪ್ರ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಆರ್.ಬಿ.ತಿಮ್ಮಾಪುರ ಸೇರಿ 60 ಕ್ಕೂ ಹೆಚ್ಚು ಸಹಕಾರಿ ಧುರೀಣರು ಮತ್ತು ನಾಯಕರು ಉಪಸ್ಥಿತರಿದ್ದರು.