ಬೆಂಗಳೂರು: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಅವರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ದೂರು ದಾಖಲಿಸಿ, ಅವರನ್ನು ಬಂಧಿಸಬೇಕು. ಆದರೆ ಎಫ್‌ಐಆರ್‌ನಲ್ಲಿ ಶಾಸಕರ ಹೆಸರನ್ನೇ ದಾಖಲಿಸಿಲ್ಲ ಎಂದು ಬಿಜೆಪಿ ಶಾಸಕ ಡಾ. ಸಿ.ಎನ್.ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.4) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಒಂದೂವರೆ ತಿಂಗಳಿನಿಂದ ಶಾಸಕರ ಹಿಂಬಾಲಕರು ಕಿರುಕುಳ ನೀಡಿದ್ದಾರೆ. ವಿನಯ್ ಏನು ತಪ್ಪು ಮಾಡಿದರೆಂದು ಕಿರುಕುಳ ಕೊಟ್ಟಿದ್ದಾರೆ. ಹಾಗಾಗಿ ನಮ್ಮ ಸಾವಿಗೆ ನ್ಯಾಯ ಕೊಡಿಸಿ ಎಂದು ವಿನಯ್ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಅಲ್ಲದೇ ಮೃತರ ಸಹೋದರ ಜೀವನ್ ಎಂಬಾತ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಸಹ ಶಾಸಕರ ಹೆಸರನ್ನೇ ಎಫ್‌ಐಆರ್ ದಾಖಲಿಸಿಲ್ಲ. ಈ ಕಾರಣಕ್ಕೆ ಸರ್ಕಾರ ಮತ್ತು ಪೊಲೀಸರಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು,
ಈ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಯಂತೂ ಮರಿಚಿಕೆಯಾಗಿದೆ, ಅಭಿವೃದ್ಧಿ ವಿಷಯದ ಬಗ್ಗೆ ಮಾತಾಡಿದ್ರೆ ಅವರುಗಳ ಮೇಲೆ ರಾಜಕೀಯ ದ್ವೇಷದಿಂದ ದೂರುಗಳು ದಾಖಲಿಸುವುದು , ಬೆದರಿಕೆಯೊಡ್ಡುವುದು ಸಾಮನ್ಯವಾಗಿದೆ ಇದರಿಂದ ಇನ್ನೇಷ್ಟು ಅಮಾಯಕರ ಜೀವ ಪಡಿಯುತ್ತೀರಿ ಸಿದ್ದರಾಮಯ್ಯನವರೇ, ಈ ಕೂಡಲೇ ದೂರನ್ನು ದಾಖಲಿಸಿ ಸಾವಿಗೆ ಕಾರಣಕರ್ತರಾದರವರನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.
ಈ ದ್ವೇಷದ ರಾಜಕಾರಣಕ್ಕೆ ಬಲಿಯಾದ ನಮ್ಮ ಕೊಡಗಿನ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.