Mysore
35
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಉಪ ಚುನಾವಣೆ | 1ಗಂಟೆ ವೇಳೆಗೆ ಬಾಗಲಕೋಟೆ ಶೇ.43, ದಾವಣಗೆರೆ ಶೇ.28ರಷ್ಟು ಮತದಾನ

ದಾವಣಗೆರೆ : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆಲವು ಸಣ್ಣಪುಟ್ಟ ಗೊಂದಲ ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಎರಡೂ ಕ್ಷೇತ್ರಗಳಲ್ಲೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಾಗಲಕೋಟೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.43, ದಾವಣಗೆರೆಯಲ್ಲಿ ಶೇ.28ರಷ್ಟು ಮತದಾನವಾಗಿದೆ.

ಬಿಜೆಪಿ, ಕಾಂಗ್ರೆಸ್‌, ಪಕ್ಷೇತರ ಸೇರಿದಂತೆ ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯವು ಇವಿಎಂಗೆ ಸೇರುತ್ತಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ವಿಜಯಲಕ್ಷಿ ಯಾರಿಗೆ ಒಲಿಯುವಳು ಎಂಬುದು ಅಂದೇ ನಿರ್ಧಾರವಾಗಲಿದೆ.

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ನಿರೀಕ್ಷೆಯಂತೆ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಎರಡೂ ಕಡೆ ಮತದಾರರು ಬೆಳಗ್ಗಿನಿಂದಲೇ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. 85 ವರ್ಷ ಮೇಲ್ಪಟ್ಟ ಹಿರಿಯರಿಗೆ ಮನೆಯಿಂದಲೇ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಸುಡುವ ಬಿಸಲನ್ನು ಲೆಕ್ಕಿಸದೆ ಮತದಾರರು ಮತಗಟ್ಟೆಗೆ ಬಂದು ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಸ್‍.ಎಸ್‍.ಮಲ್ಲಿಕಾರ್ಜುನ್‌, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಕಾಂಗ್ರೆಸ್‌‍ ಅಭ್ಯರ್ಥಿ ಸಮರ್ಥ.ಎಸ್‌.ಎಸ್‌‍ ಸೇರಿದಂತೆ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಸಾಮಾನ್ಯರಂತೆ ಸರತಿಯಲ್ಲಿ ನಿಂತು ಮತ ಹಾಕಿದರು.

ಇತ್ತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಹಾಗೂ ಅವರ ಪತ್ನಿ ಕೂಡ ಮತಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು. ಮಾಜಿ ಸಚಿವ ಎಸ್‌.ಎ ರವೀಂದ್ರನಾಥ್‌ ಅವರು ಶಿರಮಗೊಂಡನಹಳ್ಳಿ ಮತಗಟ್ಟೆ ಸಂಖ್ಯೆ 242ಕ್ಕೆ ಆಗಮಿಸಿ ಮತದಾನ ಮಾಡಿದರು. ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್‌ ಮತಗಟ್ಟೆಯ ಪ್ರವೇಶದ್ವಾರಕ್ಕೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಹಾಲುಮತ ಸಮುದಾಯದವರು ಪ್ರಪ್ರಥಮವಾಗಿ ಮತದಾನ ಮಾಡಿದರೆ ಕಣದಲ್ಲಿರುವ ಅಭ್ಯರ್ಥಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಕುಟುಂಬ ಸಮೇತ ಪೂಜೆ ಸಲ್ಲಿಸಿದ್ದಾರೆ. ಇನ್ನು ಮತದಾನ ಆರಂಭವಾಗುತ್ತಿದ್ದಂತೆ ಹಳೆಪೇಟೆಯಲ್ಲಿರುವ ಮತಗಟ್ಟೆಯಲ್ಲಿ ತಾಂತ್ರಿಕದೋಷ ಉಂಟಾಗಿ ಇವಿಎಂ ಕೆಲಹೊತ್ತು ಕೈಕೊಟ್ಟ ಪರಿಣಾಮ ಮತದಾನ ಸ್ಥಗಿತಗೊಂಡಿತ್ತು. ತಕ್ಷಣವೇ ಸಿಬ್ಬಂದಿಗಳು ಇವಿಎಂನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.

Tags:
error: Content is protected !!