ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಸಕಾಲದಲ್ಲಿ ಗೊಬ್ಬರ ವಿತರಿಸದೆ ಸಂಕಷ್ಟ ಸೃಷ್ಟಿ ಮಾಡಿರುವ ಸರ್ಕಾರದ ನೀತಿಯನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಬೆಂಗಳೂರು ಹೊರತುಪಡಿಸಿ ನಾಳೆಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಧುಮುಕಲಿದೆ.
ಬೆಂಗಳೂರು ಹೊರತುಪಡಿಸಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ರಸಗೊಬ್ಬರವನ್ನು ಪೂರೈಕೆ ಮಾಡದೆ ಅಭಾವ ಸೃಷ್ಟಿಸಿರುವ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಿದ್ದೇವೆ. ಬಿಜೆಪಿಯ ರೈತ ಮೋರ್ಚಾದಿಂದ ಎರಡು ಹಂತಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಸಗೊಬ್ಬರ ಕಳ್ಳ ದಂಧೆ ನಡೆಯುತ್ತಿದೆ. ರಸಗೊಬ್ಬರ ಅಭಾವ, ನಕಲಿ ಕೃಷಿ ಬೀಜಗಳಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ನಕಲಿ ಬಿತ್ತನೆ ಬೀಜ, ರಸಗೊಬ್ಬರ ಅಭಾವ, ಯಾರು ಕಳ್ಳಸಾಗಣೆ ಮಾಡುತ್ತಿದ್ದಾರೆ? ಇದನ್ನು ಪತ್ತೆ ಹಚ್ಚಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಸಗೊಬ್ಬರ ಕಳ್ಳದಂಧೆಗೆ ಬ್ರೋಕರ್‌ಗಳು ಕಾರಣ. ಇವರಿಗೆ ಸಹಕಾರ ಕೊಡುವ ಕೆಲಸ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ, ಕಾಳಜಿಯೂ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ದಾಸ್ತಾನು ಇಡುತ್ತಿದ್ದರು. ಅದಕ್ಕೆ ಅನುದಾನವೂ ಕೊಟ್ಟಿದ್ದರು. ಆದರೆ ಈ ಸರ್ಕಾರ ದಾಸ್ತಾನು ಅನುದಾನಕ್ಕೂ ಕಡಿತ ಮಾಡಿದೆ. ಸಾವಿರ ಕೋಟಿ ಇದ್ದ ದಾಸ್ತಾನು ಅನುದಾನವನ್ನು 400 ಕೋಟಿಗೆ ಇಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.





