ಬೆಂಗಳೂರು: ಬೆಳಗಾವಿ ಪೊಲೀಸರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಮಾನವಹಕ್ಕುಗಳ ಆಯೋಗಕ್ಕೆ ಇ-ಮೇಲ್ ಮೂಲಕ 13 ಪುಟಗಳ ದೂರು ಸಲ್ಲಿಸಿದ್ದು, ಬಂಧನದ ವೇಳೆ ಪೊಲೀಸ್ ದೌರ್ಜನ್ಯ, ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಆರೋಪಿಸಿದ್ದಾರೆ.
ಕಾನೂನು ಬಾಹೀರ ಬಂಧನ, ಕಿಡ್ನಾಪ್, ನಕಲಿ ಎಫ್‌ಐಆರ್ ಕಸ್ಟಡಿಯಲ್ಲಿ ಟಾರ್ಚರ್ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ತಲೆಗೆ ರಕ್ತ ಬಂದಿರುವ ವಿಚಾರ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದು, ಅಂದು ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ವಿವರಿಸಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಘಟನೆಗೆ ಕಾರಣರಾದವರ ಹೆಸರನ್ನು ಉಲ್ಲೇಖಿಸಿದ್ದಾರೆ. DG & iGP, ಬೆಳಗಾವಿ ಪೊಲೀಸ್ ಆಯುಕ್ತರಾದ ಲಾಡಾ ಮಾರ್ಟೀನ್, SP ಭೀಮಾಶಂಕರ್ ಗುಳೇದ್ ನೇರವಾಗಿ ಘಟನೆಗೆ ಕಾರಣ ಎಂದು ಸಿಟಿ ರವಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ದೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರನ್ನು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ತಮಗೆ ಅಪಾಯವಿದ್ದು, ಕೇಂದ್ರೀಯ ಸಶಸ್ತ್ರ ಭದ್ರತೆಯನ್ನ ಒದಗಿಸುವಂತೆ ದೂರಿನಲ್ಲಿ ಸಿ.ಟಿ.ರವಿ ಮನವಿ ಮಾಡಿದ್ದಾರೆ. ಪ್ರತಿಯೊಬ್ಬ ಅಪರಾಧಿಗೂ ಶಿಕ್ಷೆ ಆಗಬೇಕು. ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮೂಡುವಂತಾಗಬೇಕು. ಮತ್ತೆ ಈ ರೀತಿಯ ಪೊಲೀಸ್ ದೌರ್ಜನ್ಯ ಮರುಕಳಿಸಬಾರದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.