ಬೆಂಗಳೂರು: ಸಚಿವ ರಾಜಣ್ಣಗೆ ಮಂಪರು ಪರೀಕ್ಷೆ ಮಾಡಿಸಿ ಸತ್ಯ ಹೊರ ತರಬೇಕು ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ರಾಜ್ಯದಲ್ಲಿ ಕೋಲಾಹಲ ಎದ್ದಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮಂಪರು ಪರೀಕ್ಷೆ ಮಾಡಿಸಿ ಎಂದು ಆಗ್ರಹಿಸಿದ್ದಾರೆ.
ಇನ್ನು ಮುಂದುವರಿದು ಮಾತನಾಡಿದ ಅವರು, ಇದಕ್ಕೆಲ್ಲಾ ಕಾರಣ ಡಿಸಿಎಂ ಡಿಕೆಶಿ ಅವರೇ ಹೊರತು ಬೇರೆ ಯಾರೂ ಅಲ್ಲ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಸಿಬಿಐಗೆ ಕೊಟ್ಟರೆ ಸರ್ಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಲ್ಲರ ಮೇಲೂ ಷಡ್ಯಂತ್ರ ಮಾಡಿಕೊಂಡು ಬರುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಆಯ್ತು, ನನ್ನ ಮೇಲೂ ಆಯ್ತು, ರೇವಣ್ಣ ಅವರ ವಿರುದ್ಧವೂ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಸಂಶಯ ವ್ಯಕ್ತಪಡಿಸಿದ ಅವರು, ಇದರ ಹಿಂದೆ ಇರುವವರು ಯಾರು ಎಂದು ತನಿಖೆ ನಡೆಸಬೇಕು. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪು ಮಾಡಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.





