Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಮೈಸೂರು ಪಾದಯಾತ್ರೆ: ಎಚ್‌ಡಿಕೆ, ಬಿಎಸ್‌ವೈ ಸೇರಿದಂತೆ ಮೈತ್ರಿ ನಾಯಕರು ಹೇಳಿದ್ದಿಷ್ಟು?

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳು ಮೈಸೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಕೆಂಗೇರಿಯ ಜೆಕೆ ಗ್ರ್ಯಾಂಡ್‌ ಅರೆನಾ ಸೆಂಟರ್‌ನಲ್ಲಿ ಮೈಸೂರು ಚಲೋ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಚಾಲನೆ ನೀಡಿದರು.

ಮೈಸೂರು ಮುಡಾದಲ್ಲಿ 50:50 ಅನುಪಾತದಲ್ಲಿ ನಡೆದಿದೆ ಎನ್ನಲಾದ ಅಕ್ರಮ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಅವರ ಕುಟುಂಬದಿಂದ ಅಕ್ರಮ ನಡೆದಿದೆ ಎಂದು ಮೈತ್ರ ಪಕ್ಷ ಆರೋಪಿಸಿದ್ದು, ಎಚ್‌ಡಿಕೆ, ಬಿಎಸ್‌ವೈ, ಆರ್‌ ಅಶೋಕ್‌ ಸೇರಿದಂತೆ ಹಿರಿಯ ನಾಯಕರು ಮೈಸೂರು ಚಲೋ ಬಗ್ಗೆ ಮಾತನಾಡಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಮೈತ್ರಿ ಪಕ್ಷಗಳು ಹೋರಾಟ ಮಾಡುತ್ತಿವೆ. ಈ ಹೋರಾಟಕ್ಕೆ ಕೇವಲ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು, ನಾಯಕರು ಮಾತ್ರ ಭಾಗಿಯಾಗಿಲ್ಲ. ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಜನರೇ ನಮಗೆ ಸಹಕಾರ ನೀಡುತ್ತಿದ್ದಾರೆ.

ಬಿಎಸ್‌ ಯಡಿಯೂರಪ್ಪ: ಮುಡಾ ಹಗರಣ ವಿರೋಧಿಸಿ ನಾವಿಂದು ಪಾದಯಾತ್ರೆ ಮಾಡುತ್ತಿದ್ದೇವೆ. ಈ ಪಾದಯಾತ್ರೆ ಮುಗಿಯುವುದರ ಒಳಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ. ಒಂದು ವೇಳೆ ಅವರು ನೀಡದೇ ಹೋದರೇ ನಮ್ಮ ಹೋರಾಟ ಮುಂದುವರೆಯಲಿದೆ.

ಆರ್‌. ಅಶೋಕ್‌: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ದಲಿತರ ಜಮೀನನ್ನು ಲೂಟಿ ಹೊಡೆದಿದ್ದಾರೆ. ಈ ಬಗ್ಗೆ ಮಾತನಾಡಲು ನಮಗೆ ಸದನದಲ್ಲಿಯೂ ಅವಕಾಶ ಮಾಡಿಕೊಡಲಿಲ್ಲ. ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ.

ಪ್ರಹ್ಲಾದ್‌ ಜೋಶಿ: ಭ್ರಷ್ಟಾಚಾರ ಎಂಬುದು ಕಾಂಗ್ರೆಸ್‌ ಡಿಎನ್‌ಎ ನಲ್ಲೇ ಇದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ವಾಲ್ಮೀಕಿ, ಮುಡಾ ಹಗರಣ ಸೇರಿದಂತೆ ಎಲ್ಲಾ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ನಾಯಕರು ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಕಾಲ ಸನಿಹವಾಗಿದೆ.

ಬಿವೈ ವಿಜಯೇಂದ್ರ: ರಾಜ್ಯದಲ್ಲಿ ಹಣ ಲೂಟಿ ಹೊಡೆದು ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ ಕಟ್ಟಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಕಾಂಗ್ರೆಸ್‌ಗೆ ವಿರುದ್ಧ ನಿಲುವಳಿ ಮಂಡಿಸಿದಾಗಿನಿಂದ ಅವರಲ್ಲಿ ಭಯ ಉಂಟಾಗಿದೆ. ಪಾದಯಾತ್ರೆ ತಡೆಯಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಅವರಿಂದ ನಮ್ಮ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ.

Tags: