ಹಾಸನ: ವಿಧಾನ ಸಭೆ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಯಾರೇ ಆದರೂ ಕೂಡ ಭಾರತದ ಪರ ಇಲ್ಲದಿರುವ, ಬೇರೆ ದೇಶದ ಮೇಲೆ ನಿಷ್ಠೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನ ಹೊರವಲಯದ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ವಿದಾನಸಭೆ ಆವರಣದಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಎಫ್ಎಸ್ಎಲ್ ವರದಿ ಬಹಿರಂಗ ಪಡಿಸುವಂತೆ ವಿಪಕ್ಷ ನಾಯಕರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ವರದಿ ಬಂದ ಕೂಡಲೇ ಬಹಿರಂಗ ಮಾಡುತ್ತೇವೆ. ಯಾರೇ ಆದರೂ ಕೂಡ ಭಾರತದ ಪರ ಇಲ್ಲದಿರುವ, ಬೇರೆ ದೇಶದ ಮೇಲೆ ನಿಷ್ಠೆ ಇದ್ದರೆ ಅಂತಹವರ ಕಠಿಣವಾದ ಕ್ರಮ ಕೈಗೊಳ್ಳುತ್ತೇವೆ.
ದೇಶ ಭಕ್ತಿಯನ್ನು ನಮಗೆ ಬಿಜೆಪಿಯವರು ಹೇಳಿ ಕೊಡಬೇಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿ ಹೇಳಿ ಕೊಡಬೇಕಾ? ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಯಾರು? ಅವರು ರಾಜಕೀಯಕ್ಕೋಸ್ಕರ ಏನೋ ಹೇಳ್ತಾರೆ, ಅದು ಬೇರೆ ವಿಚಾರ. ಅವರು ಏನಾದರೂ ಆ ತರ ಕೂಗಿದ್ರೆ ಕಠಿಣವಾದ ಕ್ರಮ ತೆಗೆದುಕೊಳ್ತೇವೆ ಎಂದು ಸಿದ್ದರಾಮಯ್ಯ ಗುಡುಗಿದರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಷ್ಟೊಂದು ಗೊಂದಲ ಇಲ್ಲ ಹಾಸನದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಲೋಕಸಭಾ ಅಭ್ಯರ್ಥಿಗಳ ಪಟ್ಟಿ ತಕ್ಷಣ ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿ ಆಯ್ಕೆ ಮಾಡಲು ಸಮಸ್ಯೆ ಏನು ಇಲ್ಲ ಎಂದು ಅವರು ಹೇಳಿದರು.