ಬೆಂಗಳೂರು: ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರ ಕೊಟ್ಟಿದ್ದು, ಮೊದಲ ನೋಟಿಸ್ ಉತ್ತರದಲ್ಲಿದ್ದ ಹಳೆಯ ಕಥೆಯನ್ನೇ ಎರಡನೇ ನೋಟಿಸ್ ಉತ್ತರದಲ್ಲೂ ಹೇಳಿದ್ದಾರೆ. ಪರಿಣಾಮ ಯತ್ನಾಳ್ ಉತ್ತರವನ್ನು ಕೇಂದ್ರೀಯ ಶಿಸ್ತು ಸಮಿತಿ ಒಪ್ಪದೇ ಪೆಂಡಿಂಗ್‌ನಲ್ಲಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕೇಂದ್ರೀಯ ಶಿಸ್ತು ಸಮಿತಿ ಕೊಟ್ಟಿದ್ದ ಶೋಕಾಸ್ ನೋಟಿಸ್‌ಗೆ ಕೊಟ್ಟ ಉತ್ತರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಯತ್ನಾಳ್ ಕಳೆದ ವರ್ಷದ ಡಿಸೆಂಬರ್.1ರಂದು ಮೊದಲ ಶೋಕಾಸ್ ನೋಟಿಸ್ ಹಾಗೂ ಕಳೆದ ಫೆಬ್ರವರಿ.10ರಂದು 2ನೇ ಶೋಕಾಸ್ ನೋಟಿಸ್ ಕೊಡಲಾಗಿತ್ತು. ಆದರೆ ಯತ್ನಾಳ್ ಅವರು, ಮೊದಲ ನೋಟಿಸ್‌ಗೆ ಕೊಟ್ಟಿದ್ದ ಉತ್ತರವನ್ನೇ ಪುನರಾವರ್ತಿಸಿ ಎರಡನೇ ನೋಟಿಸ್‌ಗೂ ಕೊಟ್ಟಿದ್ದಾರೆ. ಮೊದಲ ನೋಟಿಸ್‌ಗೆ ಕೊಟ್ಟಿದ್ದ ಉತ್ತರದಲ್ಲಿ ವಿಜಯೇಂದ್ರ ಯಡಿಯೂರಪ್ಪ ಕುಟುಂಬ ರಾಜಕಾರಣ, ಏಕಪಕ್ಷೀಯ ನಡೆ, ಸ್ವಂತ ತಂಡ, ಹಿರಿಯರ ಕಡೆಗಣನೆ, ಹೋರಾಟ ವೈಫಲ್ಯ, ಹೊಂದಾಣಿಕೆ ರಾಜಕೀಯಗಳ ಬಗ್ಗೆ ಯತ್ನಾಳ್ ಆರೋಪಿಸಿದ್ದರು. ಇದೆಲ್ಲವೂ ವರಿಷ್ಠರ ಗಮನದಲ್ಲಿದ್ದರೂ ಉತ್ತರದಲ್ಲಿ ಮತ್ತೆ ಹಳೇ ಕತೆ ಹೇಳಿದ ಯತ್ನಾಳ್ ಅಸಲಿ ಸ್ಪಷ್ಟನೆ ಕೊಟ್ಟಿಲ್ಲ ಎನ್ನಲಾಗಿದೆ.