ಕಲಬುರಗಿ: ‘ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಮಾಡುವುದಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಸ್ಥಾನಮಾನ ತಂದು ಕೊಟ್ಟಿದ್ದೇನೆ. ಈ ಮೂಲಕ ಸಂವಿಧಾನದ ಪುಸ್ತಕದಲ್ಲಿ ಕಲಬುರಗಿ ಹೆಸರು ಸೇರಿಸಿದ್ದೇನೆ. ಆದರೆ ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಶೂನ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ನಡೆದ ಲೋಕಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಈವರೆಗೆ ಕಾಂಗ್ರೆಸ್ ದೇಶಾದ್ಯಂತ 25 ಗ್ಯಾರೆಂಟಿಗಳನ್ನು ಈಡೇರಿಸುವ ಭರವಸೆ ನೀಡುತ್ತೇವೆ. ಎಲ್ಲೇ ಕೇಳಿದರೂ ನಾನು ಒಳ್ಳೇ ಕೆಲಸ ಮಾಡಿದ್ದೇನೆ ಎಂದು ನೀವೇ ಹೇಳುತ್ತೀರಾ, ಆದರೆ ಮತಗಟ್ಟೆಗೆ ಹೋದಾಗ ನಮ್ಮನ್ನೇ ಮರೆತು ಬಿಡುತ್ತೀರಾ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಾರಿ ಕಾಂಗ್ರೆಸ್‌ನ ರಾಧಾಕೃಷ್ಣಗೆ ಮತ ನೀಡಿ ಮತ್ತೆ ಮುಂದಿನ ಐದು ವರ್ಷಗಳಲ್ಲಿ ಕಲಬುರಗಿ ಬದಲಾವಣೆ ನೋಡಿ. ನಾನಿನ್ನು ಸತ್ತಿಲ್ಲ, ಜನರ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಭಾವುಕರಾದರು.
ಕಲ್ಬುರ್ಗಿಯಲ್ಲಿ ಕೇಂದ್ರಿಯ ವಿಶ್ವ ವಿದ್ಯಾಲಯ, ಇಎಸ್ಐ, ಜವಳಿ ಪಾರ್ಕ್, ನ್ಯಾಷನಲ್ ಹೈವೇ ಎಲ್ಲವನ್ನು ಮಾಡಿದ್ದೇನೆ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯವಾಗಿದೆ. ಈ ಚುನಾವಣೆ ಕೇವಲ ರಾಧಕೃಷ್ಣ ಎಲೆಕ್ಷನ್ ಅಲ್ಲ, ಬದಲಾಗಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಚುನಾವಣೆಯಾಗಿದೆ. ಪ್ರಧಾನಿ ಮೋದಿ ಅವರು ಮಿಷನರಿ ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.





