Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸೀತಾರಾಮನ್‌ ಹಗರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸ: ವಿಪಕ್ಷ ನಾಯಕ ಆರ್‌.ಅಶೋಕ್‌

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶ ನೀಡಿರುವುದಕ್ಕೂ ಸಿಎಂ ಸಿದ್ದರಾಮಯ್ಯ ಅವರ ಮುಡಾ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಬಾಂಡ್‌ನಿಂದ ಹಣ ಕಬಳಿಕೆ ವಿಚಾರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್‌ ಆದೇಶ ಮಾಡಿರುವುದಕ್ಕೂ, ಸಿಎಂ ಸಿದ್ದರಾಮಯ್ಯ ಅವರ ಮುಡಾ ಪ್ರಕರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ‌

ಏಕೆಂದರೆ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿ, ಕೋಟ್ಯಾಂತರ ರೂ. ಬೆಲೆಬಾಳುವ ನಿವೇಶನವನ್ನು ಕಬಳಿಕೆ ಮಾಡಿಕೊಂಡಿದ್ದಾರೆ. ಆದರೆ ನಿರ್ಮಲಾ ಸೀತಾರಾಮನ್‌ ಹಣವನ್ನು ತಮ್ಮ ಸ್ವಂತಕ್ಕೆ ಬಳಸದೇ, ಪಕ್ಷಕ್ಕೆ ಬಳಸಿದ್ದಾರೆ. ಈ ಹಣದಲ್ಲಿ ಚುನಾವಣಾ ಬಾಂಡ್‌ ಮೂಲಕ ಕಾಂಗ್ರೆಸ್‌ಗೂ 1,200 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ದೊರಕಿದೆ. ಹೀಗಾಗಿ ಕಾಂಗ್ರೆಸ್‌ ನಾಯಕರು ಆ ಹಣವನ್ನು ವಾಪಸ್ಸು ನೀಡಿ ಆ ನಂತರ ಕೇಂದ್ರ ಸಚಿವರ ರಾಜೀನಾಮೆ ಬಗ್ಗೆ ಮಾತನಾಡಲಿ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಯಾರಿಗೋ ಹೇಳಿ, ಬಿಜೆಪಿ ಪಕ್ಷದವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂಬುದು ಈ ದೂರಿನ ಮೂಲಕ ಸಾಬೀತಾಗಿದೆ. ಚುನಾವಣಾ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ದೇಣಿಗೆ ಸಂಗ್ರಹಿಸಿವೆ. ಹಾಗಾಗಿ ಹಣ ತೆಗೆದುಕೊಂಡವರ ಮೇಲೆ ಎಫಐಆರ್‌ ದಾಖಲಿಸುವುದಾದರೆ ಎಲ್ಲರ ಮೇಲೂ ದೂರು ದಾಖಲಿಸಬೇಕಾಗುತ್ತದೆ. ಈ ದೂರು ರಾಜಕೀಯ ಪ್ರೇರಿತವಾಗಿದೆ ಎಂದು ಸ್ಪಷ್ಟವಾಗುತ್ತದೆ.

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹಲವು ಹಗರಣಗಳನ್ನು ಮಾಡಿ ನುಂಗಿ ನೀರು ಕುಡಿದಿದೆ. ಆದರೆ ಈಗ ಮಾತ್ರ ಸಿಬಿಐ ಅಧಿಕಾರವನ್ನು ರಾಜ್ಯದಲ್ಲಿ ಕಿತ್ತುಕೊಳ್ಳುವ ಪ್ರಯತ್ನ ಮಾಡಿ, ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಿದೆ. ಚುನಾವಣಾ ಬಾಂಡ್‌ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿ ಸರ್ಕಾರದಿಂದಲೇ ಆದೇಶ ಹೊರಡಿಸಿತ್ತು. ಆದರೆ ಸಿದ್ದರಾಮಯ್ಯ ಅವರ ಮುಡಾ ಹಗರಣ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿರಲಿಲ್ಲ. ಕಾಂಗ್ರೆಸ್‌ ನಾಯಕರು ಮುಡಾ ಪ್ರಕರಣದ ಆರೋಪದಿಂದ ತಪ್ಪಿಸಿಕೊಳ್ಳಲಿ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೆ ಪೊಲೀಸರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Tags: