ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಬೇಡಿ: ಸಚಿವೆ ಮನವಿ
ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪೋಷಣ್ ಆ್ಯಪ್ ಬಗ್ಗೆ ಜಾಗೃತಿ
ಬೆಳಗಾವಿ: ಪೋಷಣ್ ಟ್ರ್ಯಾಕರ್ ಆ್ಯಪ್ ಹ್ಯಾಕ್ ಆಗಿದೆ ಎನ್ನುವ ಮಾಹಿತಿ ಬಂದಿದೆ. ರಾಜ್ಯದ ಮಹಿಳೆಯರು, ಗರ್ಭಿಣಿಯರು ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಭುವನೇಶ್ವರಿ ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೈಬರ್ ವಂಚಕರು, ಗರ್ಭಿಣಿಯರು, ಮಹಿಳೆಯರ ಮಾಹಿತಿಯನ್ನು ಆ್ಯಪ್ ನಲ್ಲಿ ತಿಳಿದು ಮೊಬೈಲ್ ಮೂಲಕ ವಂಚಿಸುತ್ತಿರುವ ಪ್ರಕರಣಗಳು ಕೇಳಿಬರುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ಪೋಷಣ್ ಆ್ಯಪ್ ಅನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡುತ್ತದೆ. ವಂಚನೆಯಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದ ತಕ್ಷಣ ಕೇಂದ್ರದ ಗಮನ ಸೆಳೆದಿದ್ದೇವೆ. ಜೊತೆಗೆ ನಮ್ಮ 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಂದೇಶ ಕಳುಹಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದರು.
ಈ ಕುರಿತು ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಈ ಮೋಸದ ಜಾಲ ಪತ್ತೆಯಾದ ತಕ್ಷಣ ಜನರಲ್ಲಿ ಜಾಗೃತಿ ಮಾಡುವುದಕ್ಕೆ ಕ್ರಮಕೈಗೊಂಡಿದ್ದೇವೆ. ಜನ ಯಾರೂ ಇದರಲ್ಲಿ ಮೋಸ ಹೋಗಬಾರದು ಎಂದು ಸಚಿವರು ಹೇಳಿದರು.
ಎಚ್‌ಡಿಕೆ ಆರೋಪ ನಿರಾಕರಿಸಿದ ಸಚಿವೆ
ಮುಡಾ ಹಗರಣವನ್ನು ವಿಷಯಾಂತರ ಮಾಡುವ ಸಲುವಾಗಿ ತಮ್ಮ ಮೇಲೆ ಕೇಸ್ ಹಾಕಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಳ್ಳಿ ಹಾಕಿದ್ದಾರೆ. ಕಾನೂನು ಪ್ರಕಾರ ಏನು ಕ್ರಮಕೈಗೊಳ್ಳಬೇಕು ಅದನ್ನು ಕೈಗೊಳ್ಳಲಾಗಿದೆ. ಯಾವುದೇ ಪ್ರಕರಣವನ್ನು ವಿಷಯಾಂತರ ಮಾಡುವ ಅವಶ್ಯಕತೆ ಸರ್ಕಾರಕ್ಕಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.